ಧಾರವಾಡ: ಬೆಳಗಾವಿ ಲೋಕಸಭಾ ಉಪಚುನಾವಣಾ ಪ್ರಚಾರಕ್ಕೆ ರಮೇಶ್ ಜಾರಕಿಹೊಳಿ ಬರುತ್ತಾರೆ ಎಂದು ಬೃಹತ್ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ನಗರದಲ್ಲಿ ಇಂದು ಮಾತನಾಡಿದ ಅವರು, ಬೆಳಗಾವಿ ಲೋಕಸಭಾ ಉಪಚುನಾವಣಾ ಪ್ರಚಾರ ಚೆನ್ನಾಗಿ ನಡೆಯುತ್ತಿದೆ. ನಮ್ಮ ಅಭ್ಯರ್ಥಿ ಸುರೇಶ್ ಅಂಗಡಿ ಪತ್ನಿ ನಾಲ್ಕು ಲಕ್ಷ ಮತಗಳಿಂದ ಗೆಲ್ಲುತ್ತಾರೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಹಾಗೂ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪ್ರಚಾರಕ್ಕೆ ಬರಲು ಹೇಳಿದ್ದೇವೆ. ಸ್ವಲ್ಪ ದಿನಗಳಲ್ಲಿ ಅವರು ಬರಬಹುದು. ಇಷ್ಟು ದಿನ ಕೇಸ್ ಹಿನ್ನೆಲೆ, ವಿಚಾರಣೆ ಹಿನ್ನೆಲೆ ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರಲು ಸಾಧ್ಯವಾಗಲಿಲ್ಲ. ನಾನೇ ರಮೇಶ್ ಜಾರಕಿಹೊಳಿ ಜೊತೆ ಮಾತನಾಡಿದ್ದೇನೆ. ಪ್ರಚಾರಕ್ಕೆ ಬರುವ ಮಾತನ್ನು ಹೇಳಿದ್ದಾರೆ. ಅಲ್ಲದೇ ತಮ್ಮ ಕ್ಷೇತ್ರದಿಂದ ಅತೀ ಹೆಚ್ಚು ಲೀಡ್ ಕೊಡುವ ಮಾತನ್ನು ಹೇಳಿದ್ದಾರೆ ಎಂದು ಶೆಟ್ಟರ್ ತಿಳಿಸಿದ್ದಾರೆ.
ಇದೇ ವೇಳೆ ಈಶ್ವರಪ್ಪ ರಾಜ್ಯಪಾಲರಿಗೆ ಸಿಎಂ ವಿರುದ್ಧ ದೂರು ನೀಡಿದ ವಿಚಾರವಾಗಿ ಮಾತನಾಡಿದ ಶೆಟ್ಟರ್, ಅದನ್ನು ನಾನು ಸಿಎಂ ವಿರುದ್ಧ ದೂರು ಎಂದು ಅಂದುಕೊಳ್ಳಲ್ಲ. ಕೆಲವು ಭಿನ್ನಾಭಿಪ್ರಾಯ ಬಂದಿವೆ. ಸಿಎಂ ಜೊತೆ ಕುಳಿತು ಮಾತನಾಡಿದರೆ ಬಗೆಹರಿಯಲಿದೆ. ಇವು ಪಕ್ಷದ ಆಂತರಿಕ ಮಾತು, ಅವು ಅಲ್ಲೇ ಮುಗಿಯಬೇಕು. ರೇಣುಕಾಚಾರಿ ಸೇರಿ ಶಾಸಕರು ಈಶ್ವರಪ್ಪ ವಿರುದ್ಧ ಸಹಿ ಮಾಡಿದರ ಬಗ್ಗೆ ಮಾಹಿತಿ ನನಗೆ ಇಲ್ಲ ಎಂದರು.