– ಕೆಲಸ ಮಾಡಿದ ಕೂಲಿಯನ್ನೂ ಉದ್ಯಾನ ಅಭಿವೃದ್ಧಿಗೆ ವಿನಿಯೋಗ
ಮಡಿಕೇರಿ: ಉದ್ಯೋಗ ಖಾತ್ರಿ ಯೋಜನೆಯಡಿ ಜನರಿಂದ ಕೆಲಸಗಳನ್ನು ಮಾಡಿಸುವುದಕ್ಕಿಂತ ಯಂತ್ರೋಪಕರಣಗಳ ಬಳಸಿ ಕಾಮಗಾರಿ ಮಾಡಿಸುವವರೇ ಹೆಚ್ಚು. ಆದರೆ ಇಲ್ಲೊಂದು ಪಂಚಾಯಿತಿಯಲ್ಲಿ ಉದ್ಯೋಗ ಖಾತ್ರಿ ಅನುದಾನವನ್ನು ಬಳಸಿ ಶಾಲೆ, ಅಂಗನವಾಡಿಗಳ ಉದ್ಯಾನವನ್ನು ಅಭಿವೃದ್ಧಿ ಮಾಡಲಾಗಿದೆ. ಈ ಶಾಲೆಗಳು ಇದೀಗ ಖಾಸಗಿ ಶಾಲೆಗಳಿಗಿಂತಲೂ ಅಚ್ಚುಕಟ್ಟಾಗಿವೆ.
Advertisement
ಕೊರೊನಾ ಲಾಕ್‍ಡೌನ್‍ನಿಂದ ಜನರು ದುಡಿಮೆ ಇಲ್ಲದೆ ಪರದಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಮೇಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆ ಅಡಿ ಜನರಿಗೆ ತಮ್ಮ ಊರುಗಳಲ್ಲೇ ಸರ್ಕಾರಿ ಶಾಲೆ ಮತ್ತು ಅಂಗನವಾಡಿಗಳ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವ ಕೆಲಸ ನೀಡಲಾಗಿತ್ತು.
Advertisement
Advertisement
ಮೇಕೇರಿಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ, ಶುಭಾಷ್ ನಗರದ ಅಂಗನವಾಡಿ ಮತ್ತು ಹಾಕತ್ತೂರಿನ ಪ್ರೌಢಶಾಲೆ ಮೂರನ್ನು ತಲಾ 3 ಲಕ್ಷ ರೂ.ಗಳ ಅನುದಾನ ಬಳಸಿ ಉದ್ಯಾನವನ್ನು ಅಚ್ಚುಕಟ್ಟಾಗಿ ಅಭಿವೃದ್ಧಿಗೊಳಿಸಲಾಗಿದೆ. ಉದ್ಯಾನವಕ್ಕೆ ಆಧುನಿಕ ಸ್ಪರ್ಶ ನೀಡಲಾಗಿದ್ದು, ಹಲವು ಬಗೆಯ ಹೂಗಿಡಗಳು, ಅಲಂಕಾರಿಕ ಗಿಡಗಳನ್ನು ನೆಡಲಾಗಿದೆ. ಉದ್ಯಾನವನದ ದಾರಿಗಳಿಗೆ ಇಂಟರ್‍ಲಾಕ್ ಗಳನ್ನು ಅಳವಿಡಿಸಿ ಸ್ವಚ್ಛವಾಗಿರುವಂತೆ ಮಾಡಲಾಗಿದೆ. ಉದ್ಯಾನವನಕ್ಕೆ ಸ್ಪಿಂಕ್ಲರ್ ಗಳನ್ನು ಸಹ ಅಳವಡಿಸಿ ನೀರಾವರಿ ವ್ಯವಸ್ಥೆ ಮಾಡಲಾಗಿದೆ. ಅಂಗನವಾಡಿಯಲ್ಲಿಯೂ ಉದ್ಯಾನದ ಜೊತೆಗೆ ಮಕ್ಕಳ ಆಟದ ಸಾಮಾಗ್ರಿಗಳನ್ನು ಅಳವಡಿಸಿ ಮಕ್ಕಳನ್ನು ಸೆಳೆಯುವಂತೆ ಮಾಡಲಾಗಿದೆ.
Advertisement
ಮತ್ತೊಂದು ವಿಶೇಷವೆಂದರೆ ಶುಭಾಷ್ ನಗರದಲ್ಲಿ ಸ್ವಾಗತ್ ಯುವಕ ಸಂಘದ ಮೂಲಕ ಅಂಗನವಾಡಿ ಅಭಿವೃದ್ಧಿಗಾಗಿ ಕೆಲಸ ಮಾಡಿರುವ ಊರಿನ ಜನರು ತಮ್ಮ ಕೂಲಿಯ ಹಣವನ್ನೂ ಅಂಗನವಾಡಿಯ ಅಭಿವೃದ್ಧಿಗೆ ಬಳಕೆ ಮಾಡಿರುವುದು ಇತರರಿಗೆ ಮಾದರಿಯಾಗಿದೆ.
ಲಾಕ್‍ಡೌನ್ ಸಂದರ್ಭದಲ್ಲಿ ಉದ್ಯೋಗವಿಲ್ಲದೆ ಪರದಾಡುತ್ತಿದ್ದ ಜನರಿಗೆ ತಮ್ಮ ಗ್ರಾಮಗಳಲ್ಲಿಯೇ ಉದ್ಯೋಗ ಸೃಷ್ಟಿಸಿ, ಶಾಲೆ ಅಂಗನವಾಡಿಗಳನ್ನೂ ಅಭಿವೃದ್ಧಿಗೊಳಿಸಿದ ಪಂಚಾಯಿತಿ ಅಧಿಕಾರಿಗಳು ಸಹ ಇತರರಿಗೆ ಪ್ರೇರಣೆಯಾಗಿದ್ದಾರೆ.