– ಮನೆ ಕೆಲಸದವರಿಂದ್ಲೇ ಕೃತ್ಯ
– ನಾಲ್ವರು ನೇಪಾಳಿಗರ ಬಂಧನ
ಹೈದರಾಬಾದ್: ಉದ್ಯಮಿ ಮನೆಯಿಂದ 10 ಲಕ್ಷ ರೂ. 180 ಗ್ರಾಂ ಚಿನ್ನದ ಆಭರಣ ದರೋಡೆ ಮಾಡಿರುವ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ. ಕಳ್ಳತನ ಅರೋಪದ ಮೇಲೆ ನಾಲ್ವರು ನೇಪಾಳಿಗರನ್ನು ಪೊಲೀಸರು ಬಂಧಿಸಿದ್ದಾರೆ.
ಕಳ್ಳರಲ್ಲಿ ಇಬ್ಬರು ಉದ್ಯಮಿ ಮನೆಯಲ್ಲಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 19 ರಂದು ಉದ್ಯಮಿ ಮನೆಯಲ್ಲಿ ಕುಟುಂಬಸ್ಥರು ಇಲ್ಲದಿರುವುದನ್ನು ತಿಳಿದ ಕಳ್ಳರು ದರೋಡೆಗೆ ಹೊಂಚು ಹಾಕಿದ್ದಾರೆ. ಅಲ್ಲದೆ ಉದ್ಯಮಿಯ 70 ವರ್ಷದ ತಾಯಿ ಮಾತ್ರ ಮನೆಯಲ್ಲಿ ಇದ್ದರು.
ಇದೇ ಸಂದರ್ಭವನ್ನು ಉಪಯೋಗಿಸಿಕೊಂಡ ದರೋಡೆಕೋರರು ವೃದ್ಧೆಗೆ ಚಹಾದಲ್ಲಿ ನಿದ್ದೆ ಮಾತ್ರೆ ಬೆರೆಸಿ ನೀಡಿದ್ದಾರೆ. ಈ ಚಹಾ ಕುಡಿದ ವೃದ್ಧೆ ನಿದ್ದೆಗೆ ಜಾರಿದ್ದಾರೆ. ಈ ವೇಳೆ ಖತರ್ನಾಕ್ ಕಳ್ಳರು 180 ಗ್ರಾಂ ಚಿನ್ನ, 10 ಲಕ್ಷ ರೂ. ಹಣವನ್ನು ದೋಚಿ ಮನೆಯಿಂದ ಎಸ್ಕೇಪ್ ಆಗಿದ್ದಾರೆ.
ಕಳ್ಳತನ ಪ್ರಕರಣ ದಾಖಲಾಗಿದ್ದು ಆರೋಪಿಗಳನ್ನು ಬಂಧಿಸಲು 15 ತಂಡಗಳನ್ನು ರಚಿಸಲಾಗಿತ್ತು. ಅಕ್ಟೋಬರ್ 22 ಮತ್ತು 25 ರ ನಡುವೆ ಲಕ್ನೋದಲ್ಲಿ ದರೋಡೆಕೊರರನ್ನು ಬಂಧಿಸಲಾಗಿದೆ. ಪೊಲೀಸರ ಬಲೆಗೆ ಬಿದ್ದಿರುವ ಕಳ್ಳರು ನೇಪಾಳಿ ಮೂಲದವರಾಗಿದ್ದಾರೆ. ಈ ನಾಲ್ವರು ಕಳ್ಳರಿಂದ 90ಗ್ರಾಂ ಚಿನ್ನ ಮತ್ತು 1.40 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಮಹೇಶ್ ಎಂ ಭಾಗವತ್ ತಿಳಿಸಿದ್ದಾರೆ.