ಬೆಂಗಳೂರು: ಉದ್ಧವ್ ಠಾಕ್ರೆ ಅಂತವರು ನೂರು ಮಂದಿ ಬಂದರೂ ಕರ್ನಾಟಕದಲ್ಲಿರೋ ಪ್ರದೇಶ ನಮ್ಮಲ್ಲೇ ಇರುತ್ತವೆ ಎಂದು ಕರವೇ ನಾರಾಯಣ ಗೌಡ ಹೇಳಿದ್ದಾರೆ. ಬಾಳ್ ಠಾಕ್ರೆ ನಂತರ ಈ ಅಧ್ಯಾಯ ಮುಗಿದಿದೆ ಎಂದುಕೊಂಡಿದ್ದೆ ಆದರೀಗ ಅವರ ಮಗ ಉದ್ಧವ್ ಠಾಕ್ರೆ ಗಡಿ ವಿವಾದವನ್ನು ಪ್ರಾರಂಭಿಸಿದ್ದಾರೆ.
ಇಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿದ ಅವರು, ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿ ಮಹಾಜನ್ ವರದಿಯನ್ನು ಸರಿಯಾಗಿ ಓದಿ ತಿಳಿಯದುಕೊಳ್ಳದೇ ಇಂತಹ ಉದ್ಧಾಟತನದ ಹೇಳಿಕೆ ನೀಡುವುದು ಸಿಎಂ ಸ್ಥಾನಕ್ಕೆ ಯೋಗ್ಯತೆ ತರುವಂತಹದಲ್ಲ. ಅವರ ಉದ್ದೇಶ ಏನು ಅಂತ ಗೊತ್ತಿಲ್ಲ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧಾವ್ ಠಾಕ್ರೆ ಪದೇ ಪದೇ ಗಡಿ ವಿಚಾರದ ಬಗ್ಗೆ ಮಾತನಾಡುತ್ತಾರೆ. ಮರಾಠಿಗರನ್ನು ಓಲೈಸಿಕೊಳ್ಳುವ ಸಲುವಾಗಿ ಕನ್ನಡಿಗರನ್ನು ಕೆರಳಿಸುವಂತಹ ಹೇಳಿಕೆಗಳನ್ನು ಏಕೆ ನೀಡುತ್ತಾರೆ ಎಂದು ತಿಳಿದಿಲ್ಲ. ಬೆಳಗಾವಿಯಲ್ಲಿ ಒಂದೆಡೆ ಎಂಇಎಸ್ ಗಳಾದರೆ ಇನ್ನೊಂದೆಡೆ ಮಹಾರಾಷ್ಟ್ರದ ರಾಜಕಾರಣಿಗಳು ಇಂತಹ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬೆಳಗಾವಿ, ನಿಪ್ಪಾಣಿ, ಕಾರವಾರ ಇವು ಕರ್ನಾಟಕದ ಅವಿಭಾಜ್ಯ ಅಂಗಗಳು ಎಂದು ಮಹಾಜನ್ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ ಮಹಾಜನ್ ಕೂಡ ಮಹಾರಾಷ್ಟ್ರದವರೇ ಆಗಿದ್ದವರು. ಮಹಾಜನ್ ವರದಿಯನ್ನು ನೀಡಬೇಕೆಂದು ಒತ್ತಾಯಿಸಿದವರು ಕೂಡ ಮಹಾರಾಷ್ಟ್ರದವರೆ. ಮಹಾರಾಷ್ಟ್ರದ ಒತ್ತಾಯದ ಮೇರೆಗೆ ಅಂದು ಮಹಾಜನ್ ವರದಿಯನ್ನು ನೇಮಕ ಮಾಡಲಾಯಿತು. ಅದೇ ಮಹಾಜನ್ ನೀಡಿದ ವರದಿಯನ್ನು ಕರ್ನಾಟಕ ಸ್ವೀಕಾರ ಮಾಡಿದೆ. ಆದ್ರೆ ಮಹಾರಾಷ್ಟ್ರ ಸ್ವೀಕರಿಸಿಲ್ಲ ಎಂದರು.
ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿಗಳಿಗೆ ಮತ್ತು ಜನಪ್ರತಿನಿಧಿಗಳಿಗೆ ನಮ್ಮ ರಾಜ್ಯದ ರಾಜಕಾರಣಿಗಳು ಸರಿಯಾದ ರೀತಿಯಲ್ಲಿ ಉತ್ತರ ಕೊಡದ ಕಾರಣ ಅವರು ಪದೇ ಪದೇ ಕಾಲು ಕೆರೆದುಕೊಂಡು ಗಡಿ ವಿಚಾರಕ್ಕೆ ಬರುತ್ತಿದ್ದಾರೆ. ಬೆಳಗಾವಿಯಂತಹ ಪ್ರದೇಶಗಳಲ್ಲಿ ಜನರು ಗೂಂಡಾಗಿರಿ ಮಾಡುವಂತದ್ದು, ಪುಂಡಾಟಿಕೆ ನಡೆಸುವಂತಹದ್ದು, ಇದು ಕರ್ನಾಟಕದ ಗಡಿಭಾಗದಲ್ಲಿ ಇರುವಂತಹ ರಾಜಕಾರಣಿಗಳ ದೌರ್ಬಲ್ಯಗಳಾಗಿವೆ. ಇಂದು ಅವರನ್ನು ಇಷ್ಟರ ಮಟ್ಟಿಗೆ ಮಾತನಾಡಲು ಕಾರಣವಾಗಿದೆ. ಗಡಿ ಭಾಗದ ರಾಜಕಾರಣಿಗಳಿಗೆ ಒಂದು ಚೂರು ಕೂಡ ನನ್ನ ನಾಡು, ನನ್ನ ಭಾಷೆ, ನನ್ನ ಸಂಸ್ಕøತಿ ಎಂಬ ಸ್ವಾಭಿಮಾನವಿಲ್ಲ. ನಾಡು, ನುಡಿ, ಗಡಿ ವಿಚಾರ ಬಂದಾಗ ನಮ್ಮ ರಾಜ್ಯ ರಾಜಕಾರಣಿಗಳು ಉಗ್ರವಾಗಿ ಖಂಡಿಸುವ ಕೆಲಸ ಮಾಡಬೇಕು ಎಂದರು.
ಮಹಾರಾಷ್ಟ್ರದ ಮುಖ್ಯಮಂತ್ರಿಗಳು ಅಷ್ಟೆಲ್ಲಾ ಮಾತನಾಡುವಾಗ ಕರ್ನಾಟಕದ ಮುಖ್ಯಮಂತ್ರಿಗಳು ಏಕೆ ಮಾತನಾಡಬಾರದು, ಏಕೆ ಸರಿಯಾದ ರೀತಿಯಲ್ಲಿ ಉತ್ತರ ನೀಡಬಾರದು ಎಂದು ಪ್ರಶ್ನಿಸಿದರು. ನಮ್ಮ ರಾಜಕಾರಣಿಗಳು ಉತ್ತರ ನೀಡದ ಪರಿಣಾಮ ಇಂದು ಅವರು ಹೆಚ್ಚಾಗಿ ಮಾತನಾಡುತ್ತಿದ್ದಾರೆ. ಹಾಗಾಗಿ ಮಾನ್ಯ ಮುಖ್ಯಮಂತ್ರಿಗಳು ಮಾತನಾಡಿ ಮಹಾಜನ್ ವರದಿಯನ್ನು ಓದಿ ಅದನ್ನು ಒಪ್ಪಿಕೊಂಡಿದ್ದೇವೆ. ಮಹಾಜನ್ ವರದಿ ಪ್ರಕಾರ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು, ಅದನ್ನು ಮಹಾರಾಷ್ಟ್ರಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ, ಅದು ಕರ್ನಾಟಕದ ಅವಿಭಾಜ್ಯ ಅಂಗ ಎಂದು ಹೇಳಬೇಕು. ಇಲ್ಲದೇ ಹೋದರೆ ಮತ್ತೆ ಮತ್ತೆ ಕ್ಯಾತೆ ತೆಗೆಯುವ ಕೆಲಸ ಮಾಡುತ್ತಾರೆ ಎಂದು ಹೇಳಿದರು.
ಉದ್ಧವ್ ಠಾಕ್ರೆ ಅಂತವರು ನೂರು ಮಂದಿ ಬಂದರೂ ಕರ್ನಾಟಕದಲ್ಲಿರುವ ಬೆಳಗಾವಿ ಪ್ರದೇಶ ನಮ್ಮಲ್ಲೆ ಇರುತ್ತವೇ. ಇದೇ ರೀತಿ ಮಹಾರಾಷ್ಟ್ರ ಸರ್ಕಾರದವರು ಖ್ಯಾತೆ ತಗೆಯುತ್ತಿದ್ದರೆ ನಾವು ಹೋರಾಟ ಮಾಡುತ್ತೆವೇ ಎಂಬ ಎಚ್ಚರಿಕೆ ಸಂದೇಶವನ್ನ ಕರವೇ ನಾರಾಯಣ ಗೌಡ ರವಾನಿಸಿದ್ದಾರೆ.