– ಮಾಯದ ಮಳೆಗೆ ರಸ್ತೆ, ಸೇತುವೆಗಳೇ ಮಾಯ
– ಬಿಸಿಲ ನಾಡ ಬದುಕು ಹೈರಾಣಾಗಿಸಿದ ರಣಮಳೆ
– ಉಕ್ಕಿದ ಭೀಮಾ, ಕಾಗಿಣಾ ನದಿ, ಪ್ರವಾಹ ಭೀತಿ
ಬೆಂಗಳೂರು: ಮಹಾಮಳೆಗೆ ಉತ್ತರ ಕರ್ನಾಟಕ ನಲುಗಿದ್ದು, ಜನರು ಜೀವ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಜಲಾಸುರನ ದಾಳಿಗೆ ಕಲಬುರಗಿ, ಯಾದಗಿರಿ, ವಿಜಯಪುರ, ಬೀದರ್, ರಾಯಚೂರು ಜಿಲ್ಲೆಗಳು ತತ್ತರಿಸಿದ್ದು, ಗಾಯದ ಮೇಲೆ ಬರೆ ಎಳೆದಂತೆ ಕೊಯ್ನಾ ಜಲಾಶಯದಿಂದ ನೀರು ಹೊರ ಬಿಡಲಾಗುತ್ತಿದೆ. ಕೊಯ್ನಾದಿಂದ ಅತಿ ಹೆಚ್ಚು ನೀರು ಹೊರ ಬಂದಲ್ಲಿ ಬೆಳಗಾವಿ, ಚಿಕ್ಕೋಡಿ ಮತ್ತು ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ.
Advertisement
ಕಲಬುರಗಿ ಜಿಲ್ಲೆಯಲ್ಲಿ ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಇತ್ತ ಮಹಾರಾಷ್ಟ್ರದಿಂದ ಭಾರೀ ಪ್ರಮಾಣದ ನೀರು ಬಿಡುಗಡೆ ಸಾಧ್ಯತೆ ಹಿನ್ನೆಲೆ ಕಲಬುರಗಿ ಜನರಿಗೆ ಜಿಲ್ಲಾಡಳಿತದಿಂದ ಎಚ್ಚರಿಕೆ ನೀಡಿದೆ. ಮಹಾರಾಷ್ಟ್ರದ ಉಜನಿ, ವೀರ್ ಡ್ಯಾಂನಿಂದ ನೀರು ರಿಲೀಸ್ ಮಾಡಲಾಗುತ್ತಿದ್ದು, ಭೀಮಾ ನದಿಗೆ 1 ಲಕ್ಷ 23 ಸಾವಿರ ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗಿದೆ. ಮಳಖೇಡ ಉತ್ತರಾಧಿ ಮಠ ಸಂಪೂರ್ಣ ಮುಳುಗಡೆಯಾಗಿದ್ದು, ಗೋವುಗಳು, ಅರ್ಚಕರ ಕುಟುಂಬ ಸಂಕಷ್ಟದಲ್ಲಿ ಸಿಲುಕಿದೆ.
Advertisement
Advertisement
Advertisement
ಕಲಬುರಗಿ ಜಿಲ್ಲೆಯಾದ್ಯಂತ ಭಾರೀ ಮಳೆ ಆಗ್ತಿರುವ ಹಿನ್ನೆಲೆ ಹಾಗರಗುಂಡಗಿ ಗ್ರಾಮದಲ್ಲಿ ಕೆರೆ ಒಡ್ಡು ಒಡೆದು ಭಾರೀ ಅವಾಂತರ ಸೃಷ್ಟಿಯಾಗಿದೆ. ಜಮೀನುಗಳಿಗೆ ಅಪಾರ ಪ್ರಮಾಣದ ನೀರು ನುಗ್ಗಿದೆ. ಕೆರೆಯ ಕೆಳ ಭಾಗ ಹೊಲಗಳೆಲ್ಲಾ ಜಲಾವೃತವಾಗಿದ್ದು ಬೆಳೆಗಳೆಲ್ಲಾ ನೀರು ಪಾಲಾಗಿದೆ. ಇದರಿಂದ ಕೊರೊನಾ ಮಧ್ಯೆ ರೈತನಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಜೊತೆಗೆ ಚಿಂಚೋಳಿಯ ನಾಗಾಯಿದಲಾಯಿ ಗ್ರಾಮದ ಕೆರೆ ಒಡೆದಿದೆ. ನೀರಿನ ರಭಸಕ್ಕೆ ಕೆರೆಯ ತಡೆಗೋಡೆ ಕುಸಿದು ನೀರು ಮುನ್ನಗ್ಗುತ್ತಿದೆ. ಪರಿಣಾಮ ಸುತ್ತಮುತ್ತಲ ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ. ಜೊತೆಗೆ ಭೋಸಗಾ ಕೆರೆ ಕೂಡ ಭರ್ತಿ ಆಗಿದ್ದು ಕೆರೆಯಿಂದ ಅಪಾರ ಪ್ರಮಾಣದ ನೀರು ಬಿಡಲಾಗ್ತಿದೆ. ಗ್ರಾಮಸ್ಥರಿಗೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸೂಚಿಸಿದೆ.
ಪ್ರವಾಹದಲ್ಲಿ ಸಿಲುಕಿದ್ದ ಐವರನ್ನು ರಕ್ಷಣೆ ಮಾಡಲಾಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ಹೊರವಲಯದ ತೋಟದಲ್ಲಿ ಸುತ್ತ ನೀರು ಆವರಿಸಿದ್ದರಿಂದ ಮನೆಯ 5 ಮಂದಿ ಮನೆ ಮೇಲ್ಛಾವಣಿಯಲ್ಲಿ ಆಶ್ರಯ ಪಡೆದಿದ್ದರು. ರಕ್ಷಣೆಗಾಗಿ ಮೊರೆ ಇಟ್ಟಿದ್ದರು. ತಕ್ಷಣ ಸ್ಪಂದಿಸಿದ ಎನ್‍ಡಿಆರ್‍ಎಫ್ ತಂಡ ಬೋಟ್‍ನಲ್ಲಿ ತೆರಳಿ ದಂಪತಿ, ಇಬ್ಬರು ಮಕ್ಕಳು, ಕೃಷಿ ಕಾರ್ಮಿಕನನ್ನು ರಕ್ಷಿಸಿದೆ. ಜೀವ ಉಳಿಸಿಕೊಂಡ ಐವರು ರಕ್ಷಣಾ ತಂಡಕ್ಕೆ ಧನ್ಯವಾದ ಹೇಳಿದ್ದಾರೆ. ಕಮಲಾಪುರ ತಾಲೂಕಿನಲ್ಲಿ ಜವಳಗಾ ಬಿ ಗ್ರಾಮದ ರಸ್ತೆ ಕೊಚ್ಚಿ ಹೋಗಿದೆ. ರಸ್ತೆ ಯಾವುದು? ನದಿ ಯಾವುದು ಎಂದು ಗೊತ್ತಾಗುತ್ತಲೇ ಇಲ್ಲ. ಇದರಿಂದ ಜವಳಗಾ ಬಿ- ವಡಾಲ ಗ್ರಾಮದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಇಲ್ಲಿ ರಸ್ತೆ ಇತ್ತು ಎಂಬ ಸುಳಿವೇ ಇಲ್ಲದಂತೆ ರಸ್ತೆ ಕೊಚ್ಚಿ ಹೋಗಿದ್ದು ಗ್ರಾಮಸ್ಥರು ಆತಂಕದಲ್ಲಿದ್ದಾರೆ.
ಭೋರ್ಗರೆಯುತ್ತಿರುವ ಭೀಮಾ ನದಿ ನೋಡಲು ಹೋಗಿದ್ದ ಯುವಕ ಕೊಚ್ಚಿ ಹೋಗಿದ್ದಾನೆ. ಕಲಬುರಗಿ ಜಿಲ್ಲೆ ಜೇವರ್ಗಿ ತಾಲೂಕಿನ ನರಿಬೋಳ ಗ್ರಾಮದ 21 ವರ್ಷದ ಭಗವಾನ್ ಎಂಬ ಯುವಕನಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ರಣರಕ್ಕಸ ಮಳೆ ಮುತ್ತಿನ ನಗರಿ ಹೈದ್ರಾಬಾದ್ ನಲುಗಿ ಹೋಗಿದೆ. 24 ಗಂಟೆಯಲ್ಲಿ 20 ಸೆಂ.ಮೀಟರ್ ಮಳೆ ಸುರಿದೆ. ಮಳೆಯಿಂದಾಗಿ ಹೈದ್ರಾಬಾದ್‍ನಲ್ಲಿ 19 ಮಂದಿ, ತೆಲಂಗಾಣದಲ್ಲಿ 30 ಮಂದಿ ಸಾವನ್ನಪ್ಪಿದ್ದಾರೆ. ಇನ್ನು ಆಸ್ಪತ್ರೆಗೂ ನೀರು ನುಗ್ಗಿದ್ದು, ಕೆರೆಯಂತಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತು ಸಂಚಾರ ಅಸ್ತವ್ಯಸ್ತವಾಗಿತ್ತು. ಹೈದ್ರಾಬಾದ್‍ನ ಫಲಕ್ನುಮಾ ಬಳಿಯ ಬರ್ಕಾಸ್‍ನಲ್ಲಿ ವ್ಯಕ್ತಿಯೊಬ್ಬರು ನೋಡು ನೋಡ್ತಿದ್ದಂತೆ ಪ್ರವಾಹದಲ್ಲಿ ಕೊಚ್ಚಿಹೋಗಿದ್ದಾರೆ.