ಬೆಂಗಳೂರು: ಉತ್ತರ ಕರ್ನಾಟಕದ ಲಿಂಗಾಯತ ಶಾಸಕರಿಗೆ ಮುಂದಿನ ಮುಖ್ಯಮಂತ್ರಿ ಪಟ್ಟ ಸಿಗುವ ಸಾಧ್ಯತೆಗಳಿವೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.
ಸಿಎಂ ಯಡಿಯೂರಪ್ಪ ರಾಜೀನಾಮೆ ನೀಡುವ ಬಗ್ಗೆ ಹೇಳಿದ್ದು, ಮುಂದಿನ ಸಿಎಂ ಬಗ್ಗೆ ಚರ್ಚೆಗಳು ಜೋರಾಗಿವೆ. ಈಗಾಗಲೇ ದೆಹಲಿ ಮಟ್ಟದಲ್ಲಿ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿದ್ದು, ಹೆಸರು ಘೋಷಣೆಗೆ ಮುಹೂರ್ತ ನಿಗದಿ ಮಾಡುತ್ತಿದ್ದಾರೆ ಎನ್ನಲಾಗಿದೆ.
ದೆಹಲಿಯಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ ಮತ್ತು ಪ್ರಹ್ಲಾದ್ ಜೋಶಿ ರಹಸ್ಯ ಚರ್ಚೆಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೆಲವೇ ಗಂಟೆಗಳಲ್ಲಿಯೇ ರಾಜಭವನಕ್ಕೆ ತೆರಳಿ ರಾಜ್ಯಪಾಲರಿಗೆ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ಸಲ್ಲಿಸಲಿದ್ದಾರೆ.
ಕಣ್ಣೀರು ಹಾಕಿ ವಿದಾಯ: 75 ವರ್ಷ ವಯಸ್ಸಾಗಿದ್ರೂ ಪಕ್ಷ ನನಗೆ ಸಿಎಂ ಸ್ಥಾನ ನೀಡಿ ಸೇವೆ ಸಲ್ಲಿಸಲು ಅವಕಾಶ ನೀಡಿದೆ. ಪ್ರಧಾನಿ ಮೋದಿ, ಜೆಪಿ ನಡ್ಡಾ, ಅಮಿತ್ ಶಾ ಅವರಿಗೆ ಈ ಅವಕಾಶ ನೀಡಿದ್ದಕ್ಕೆ ಧನ್ಯವಾದ ಹೇಳುತ್ತೇನೆ. ಈ ರಾಜೀನಾಮೆಯನ್ನು ನೋವಿನಂದಲ್ಲ, ಸಂತೋಷದಿಂದ ನೀಡುತ್ತಿದ್ದೇನೆ. ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದು ಕೇಂದ್ರದ ನಾಯಕರು ಅಪೇಕ್ಷೆ ಹೊಂದಿದ್ದಾರೆ. ಮೋದಿ, ನಡ್ಡಾ ಮತ್ತು ಶಾ ಅವರಿಗೆ ಪದಗಳಲ್ಲಿ ಅಭಿನಂದನೆ ಸಲ್ಲಿಸಲು ಆಗಲ್ಲ. ಮತ್ತೆ ಪಕ್ಷ ಅಧಿಕಾರಕ್ಕೆ ಬರುವ ನಿಟ್ಟಿನಲ್ಲಿ ಕೆಲಸ ಮಾಡೋಣ ಎಂದು ಹೇಳಿದರು.
ಕರ್ನಾಟಕದಲ್ಲಿ ಬಿಜೆಪಿ ಸರ್ಕಾರ ರಚನೆಯಾದ ಸಂದರ್ಭವನ್ನು ಮೆಲುಕು ಹಾಕಿದ ಅವರು, ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿದ ನಾನು, ಶಿವಮೊಗ್ಗದ ಶಿಕಾರಿಪುರದಿಂದ ರಾಜಕೀಯ ಜೀವನ ಆರಂಭಿಸಿದೆ. ಅಂದು ಮೊದಲ ಬಾರಿಗೆ ಇಬ್ಬರು ಶಾಸಕರಾಗಿ ಆಯ್ಕೆಯಾಗಿದ್ದೇವು. ಆದ್ರೆ ನನ್ನ ಜೊತೆಯಲ್ಲಿದ್ದ ಮತ್ತೊಬ್ರು ರಾಜೀನಾಮೆ ನೀಡಿದಾಗ ಏಕಾಂಗಿಯಾಗಿ ಹೋರಾಟ ನಡೆಸಿದ್ದೇನೆ. ಅಂದು ಆಯೋಜಿಸಿದ ಕಾರ್ಯಕ್ರಮಗಳನ್ನು ನೋಡಿ ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್ ಅಚ್ಚರಿ ವ್ಯಕ್ತಪಡಿಸಿದ್ದರು ಎಂದು ಹೇಳಿದರು.
ಕೇಂದ್ರದಲ್ಲಿ ವಾಜಪೇಯಿ ಸರ್ಕಾರ ರಚನೆಯಾಗಿತ್ತು. ಅಂದು ವಾಜಪೇಯಿ ಅವರು ಕೇಂದ್ರದ ಸಚಿವರಾಗುವಂತೆ ಹೇಳಿದ್ದರು. ಇಲ್ಲ ನಾನು ರಾಜ್ಯದಲ್ಲಿ ಪಕ್ಷ ಕಟ್ಟಬೇಕು. ದೆಹಲಿ ರಾಜಕಾರಣಕ್ಕೆ ಬರಲ್ಲ ಅಂತ ವಿನಮ್ರದಿಂದ ಹೇಳಿದೆ ಎಂದು ಹೇಳಿ ಭಾವುಕರಾದರು.