– ಬೈಕಲ್ಲಿ ಹಳ್ಳ ದಾಟುವ ಹುಚ್ಚು ಸಾಹಸದಿಂದ ಎಡವಟ್
ಬೆಂಗಳೂರು: ಕೊಂಚ ಬಿಡುವು ಕೊಟ್ಟಿದ್ದ ವರುಣ ಮತ್ತೆ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಉತ್ತರ ಕರ್ನಾಟಕದಲ್ಲಿ ಮತ್ತೆ ಪ್ರವಾಹ ಸ್ಥಿತಿ ನಿರ್ಮಾಣವಾಗಿದೆ. ಬೀದರ್, ರಾಯಚೂರು, ಕಲಬುರಗಿ, ಗದಗ, ಬಾಗಲಕೋಟೆ, ಯಾದಗಿರಿ, ವಿಜಯಪುರ, ಧಾರವಾಡ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಶುಕ್ರವಾರ ರಾತ್ರಿಯಿಂದ ಭಾರೀ ಮಳೆಯಾಗುತ್ತಿದೆ.
ವರುಣನ ಅಬ್ಬರಕ್ಕೆ ಬಹುತೇಕ ಕಡೆ ಪ್ರವಾಹ ಸ್ಥಿತಿ ಏರ್ಪಟ್ಟಿದ್ದು, ಒಬ್ಬರು ಬಲಿ ಆಗಿದ್ದಾರೆ. ಹತ್ತಾರು ಮನೆಗಳು ಕುಸಿದಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಾವಿರಾರು ಎಕರೆ ಬೆಳೆ ನೀರು ಪಾಲಾಗಿದೆ. ಬಾಗಲಕೋಟೆಯ ಮುಧೋಳದಲ್ಲಿ ಹಳ್ಳದಲ್ಲಿ ವ್ಯಕ್ತಿಯೊಬ್ಬರು ಕೊಚ್ಚಿಹೋಗಿ ಸಾವನ್ನಪ್ಪಿದ್ದಾರೆ. ಯಾದಗಿರಿಯ ಎಲೇರಿ ಹಳ್ಳ ತುಂಬಿ ಸೇತುವೆ ಮೇಲೆ ನೀರು ಹರಿಯುತ್ತಿದೆ. ಇಂತಹ ಅಪಾಯಕಾರಿ ಸ್ಥಿತಿಯಲ್ಲೂ ಸೇತುವೆ ದಾಟಲು ಹೋಗಿ ಬೈಕ್ ಸವಾರರು ಎಡವಟ್ ಮಾಡಿಕೊಂಡರು. ನೀರಿನ ಸೆಳೆತಕ್ಕೆ ಸಿಕ್ಕಿ ಬೈಕ್ ಪಲ್ಟಿ ಹೊಡಿತು. ಒಬ್ಬ ಬಚಾವ್ ಆದ್ರೆ, ಮತ್ತೊಬ್ಬ ನೀರಲ್ಲಿ ಕೊಚ್ಚಿ ಹೋಗಿದ್ದನು. ಕೂಡಲೇ ಸ್ಥಳೀಯರು ಹರಸಾಹಸ ಮಾಡಿ ರಕ್ಷಣೆ ಮಾಡಿದ್ದಾರೆ.
ಕಲಬುರಗಿಯ ಸೇಡಂನಲ್ಲಿ ಮೀನುಗಾರನೊಬ್ಬ ಕಾಗಿಣಾ ನದಿಯಲ್ಲಿ ಕೊಚ್ಚಿಹೋಗಿದ್ದು, ಶೋಧ ಕಾರ್ಯ ನಡೆಯುತ್ತಿದೆ. ಕಲಬುರಗಿಯ ಜೇವರ್ಗಿಯಲ್ಲಿ ಪಿಡಬ್ಲ್ಯೂಡಿ ಕ್ವಾಟ್ರರ್ಸ್ ರಸ್ತೆ ಕೊಚ್ಚಿಹೋಗಿದೆ. ಉದನೂರು ಬಳಿ ರಸ್ತೆ ಕೊಚ್ಚಿಹೋಗಿದೆ. ಮನೆಗಳಿಗೆ ನೀರು ನುಗ್ಗಿದೆ. ವಿಜಯಪುರದಲ್ಲಿ ಡೋಣಿ ನದಿ ಪಾಲಾಗ್ತಿದ್ದ ಬೈಕ್ ಸವಾರನನ್ನು ಸ್ಥಳೀಯರು ಬಚಾವ್ ಮಾಡಿದ್ದಾರೆ. ಮನೆಗಳಿಗೆ ನೀರು ನುಗ್ಗಿದ್ದು, ಕೆರೆಯಂತೆ ಭಾಸವಾಗ್ತಿದೆ.
ರಾಯಚೂರಿನಲ್ಲಂತೂ ರಸ್ತೆಗಳಲ್ಲಿ ಮೊಳಕಾಲುದ್ದ ನೀರು ಹರೀತಿದೆ. ತಗ್ಗು ಪ್ರದೇಶದ ಮನೆಗಳೆಲ್ಲಾ ಜಲಾವೃತವಾಗಿ ಜನ ಪರದಾಡಿದ್ದಾರೆ. ಯಾದಗಿರಿಯ ಶಹಾಪುರದಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಪಾಚಿಕಟ್ಟಿದ ನೀರಲ್ಲಿ ಅಂಗವಿಕಲನೊಬ್ಬ ಪರದಾಡಿದ್ದಾನೆ. ನಾರಾಯಣಪುರ ಡ್ಯಾಂನಿಂದ 1.5 ಲಕ್ಷ ಕ್ಯೂಸೆಕ್ ನೀರನ್ನು 25 ಕ್ರೆಸ್ಟ್ ಗೇಟ್ ತೆಗೆದು ಕೃಷ್ಣಾ ನದಿಗೆ ಹೊರಬಿಡಲಾಗುತ್ತಿದೆ. ಹಲವು ಸೇತುವೆಗಳು ಮುಳುಗಡೆ ಆಗಿದ್ದು, ರೈತರು ಪರದಾಡ್ತಿದ್ದ ದೃಶ್ಯಗಳು ಕಂಡು ಬಂದಿವೆ.
ಬೀದರ್ ನಲ್ಲಿ ಮಾಂಜ್ರಾ ನದಿ ಉಕ್ಕಿ ಹರಿಯುತಿದೆ. ಉಡುಪಿಯಲ್ಲೂ ಭಾರೀ ಮಳೆಯಾಗ್ತಿದ್ದು, ಈ ನೀರೆಲ್ಲಾ ಸಮುದ್ರ ಸೇರ್ತಿರುವ ಕಾರಣ ಸಮುದ್ರ ಪ್ರಕ್ಷುಬ್ಧಗೊಂಡಿದೆ. ಉತ್ತರ ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಲ್ಲಿ ನಾಳೆ ನಾಡಿದ್ದು, ಭಾರೀ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬೆಂಗಳೂರು, ಚಿತ್ರದುರ್ಗ, ಮೈಸೂರು, ದಾವಣಗೆರೆ ಸೇರಿ ಹಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಂಭವ ಇದೆ.