ಕಾರವಾರ/ಬಾಗಲಕೋಟೆ: ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಮಳೆ ಒಂದೆಡೆಯಾದರೆ, ಮಹಾರಾಷ್ಟ್ರದಲ್ಲಾಗುತ್ತಿರುವ ಧಾರಾಕಾರ ಮಳೆಯಿಂದಾಗಿ ಅಪಾರ ಪ್ರಮಾಣದಲ್ಲಿ ನೀರು ಕರ್ನಾಟಕಕ್ಕೆ ಹರಿದುಬರುತ್ತಿದೆ. ಇದರಿಂದ ಜಿಲ್ಲೆಯಲ್ಲಿ ಪ್ರವಾಹ ಉಂಟಾಗಿದೆ.
ಕೃಷ್ಣೆ, ಮಲಪ್ರಭಾ, ಘಟಪ್ರಭಾ ನದಿಗಳ ಅಬ್ಬರ ಏರಿದೆ. ಕೊಯ್ನಾ ಜಲಾಶಯದಿಂದ ನೀರು ಬಿಡಲಾಗುತ್ತಿದ್ದು, ಕೃಷ್ಣಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಮಹಾರಾಷ್ಟ್ರದ ಪುಣೆ, ರತ್ನಗಿರಿ, ಸತಾರಾ, ಕೊಲ್ಹಾಪುರದಲ್ಲಿ ಆರೆಂಜ್ ಅಲರ್ಟ್ ಘೋಷಣೆ ಆಗಿದ್ದು, ಆಗಸ್ಟ್ 22ರವರೆಗೂ ಧಾರಾಕಾರ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ಉತ್ತರ ಕರ್ನಾಟಕದಲ್ಲಿರುವ ಆಲಮಟ್ಟಿ, ನಾರಾಯಣಪುರ, ತುಂಗಭದ್ರಾ ಡ್ಯಾಂನಿಂದಲೂ ಅಪಾರ ಪ್ರಮಾಣದಲ್ಲಿ ನೀರನ್ನ ಹೊರಬಿಡಲಾಗುತ್ತಿದೆ.
Advertisement
Advertisement
ಬೆಳಗಾವಿ, ಬಾಗಲಕೋಟೆ, ವಿಜಯಪುರ, ರಾಯಚೂರು, ಗದಗ, ಧಾರವಾಡ, ಬಳ್ಳಾರಿಯಲ್ಲಿ ಪ್ರವಾಹ ಸ್ಥಿತಿ ನಿರ್ಮಾಣ ಆಗಿದೆ. ರಸ್ತೆ, ಸೇತುವೆಗಳು ಜಲಾವೃತಗೊಂಡಿವೆ. ಮನೆ, ಜಮೀನುಗಳಿಗೆ ನೀರು ನುಗ್ಗಿದೆ. ಪ್ರವಾಹದಲ್ಲಿ ಸಿಲುಕಿದ್ದವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರ ಮಾಡಲಾಗುತ್ತಿದೆ. ಹವಾಮಾನ ಇಲಾಖೆ ಪ್ರಕಾರ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇವತ್ತು ಸಾಧಾರಣ ಮಳೆ ಆಗಲಿದೆ.
Advertisement
Advertisement
ಕೃಷ್ಣೆಯ ರುದ್ರನರ್ತನಕ್ಕೆ ಕುಂದಾನಗರಿ ಬೆಳಗಾವಿ ನಲುಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾನಯನ ಪ್ರದೇಶದಲ್ಲಿ ಭಾರೀ ಮಳೆ ಹಿನ್ನೆಲೆಯಲ್ಲಿ ಘಟಪ್ರಭೆ, ಮಲಪ್ರಭೆಯ ಅಬ್ಬರ ಜೋರಾಗಿದೆ. ಮಾರ್ಕಂಡೇಯ, ಹಿರಣ್ಯಕೇಶಿ ನದಿಯಲ್ಲಿ ಪ್ರವಾಹದಿಂದ ಗೋಕಾಕ್ ನಗರ ಮುಳುಗಿದೆ. ಹೊಲ ಗದ್ದೆಗಳು, ರಸ್ತೆ-ಸೇತುವೆಗಳು ಜಲಮಯವಾಗಿವೆ. ಗೋಕಾಕ್‍ನ ಹಳೆಯ ದನದ ಪೇಟೆ ಬಳಿ ನೂರಕ್ಕೂ ಅಧಿಕ ಮನೆಗಳು ಜಲಾವೃತವಾಗಿವೆ. ಘಟಪ್ರಭಾ ನದಿಗೆ 79,967 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಗೋಕಾಕ್‍ನ ಮಹಾಲಿಂಗೇಶ್ವರ ನಗರಕ್ಕೆ ನದಿ ನೀರು ನುಗ್ಗಿದ್ದು, ಮನೆಗಳು, ಅಂಗಡಿ ಮುಂಗಟ್ಟು ಮುಳುಗಡೆಯಾಗಿದೆ.
ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹಕ್ಕೆ ವೀರಶೈವ ಲಿಂಗಾಯತ ಶಕ್ತಿಪೀಠ ಎಂದು ಕರೆಯಲಾಗಿರುವ ಬಾದಾಮಿ ತಾಲೂಕಿನ ಶಿವಯೋಗಿ ಮಂದಿರ ಸೇತುವೆ ಜಲಾವೃತವಾಗಿದೆ. ಗೋವಿನಕೊಪ್ಪ, ನೆಲ್ಲಿಗೆ ಸಂಕೇಶ್ವರ, ಬಾಚಿನಗುಡ್ಡ ಮಂಗಳೂರು, ಶಿರಬಡಗಿ ಗೋನಾಳ ಗ್ರಾಮಗಳ ರಸ್ತೆ ಸಂಪರ್ಕ ಕಡಿತವಾಗಿದೆ. ಘಟಪ್ರಭೆ ಅಬ್ಬರಕ್ಕೆ ಮುಧೋಳ ತಾಲೂಕಿನ ಕೆಲ ಗ್ರಾಮಗಳಲ್ಲಿ ಪ್ರವಾಹ ಆತಂಕ ಎದುರಾಗಿದೆ. 80 ಸಾವಿರ ಕ್ಯೂಸೆಕ್ ನೀರು ನದಿಗೆ ಹರಿದು ಬರುತ್ತಿರುವುದರಿಂದ ಘಟಪ್ರಭೆಗೆ ಅಡ್ಡಲಾಗಿ ಕಟ್ಟಿರುವ ಮುಧೋಳ ನಗರದ ಯಾದವಾಡ ಸೇತುವೆ ಮುಳುಗಡೆ ಆಗಿದೆ. ರೂಗಿ, ಒಂಟಗೋಡಿ, ಚನಾಳ್, ರಂಜನಗಿ ಮತ್ತು ಯಾದವಾಡ್ ಸೇರಿದಂತೆ 15 ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. ಬಾದಾಮಿ-ಗದಗ ನಡುವಿನ ಚೊಳಚಗುಡ್ಡ ರಸ್ತೆಯನ್ನ ಪೊಲೀಸರು ಮುಳ್ಳಿನ ರಾಶಿಯನ್ನ ಹಾಕಿ ಬಂದ್ ಮಾಡಿದ್ದಾರೆ.
ಇತ್ತ ಗದಗ ಜಿಲ್ಲೆ ನರಗುಂದ ತಾಲೂಕಿನ ಅನೇಕ ಗ್ರಾಮಗಳಲ್ಲಿ ಪ್ರವಾಹ ಸೃಷ್ಟಿ ಆಗಿದೆ. ಲಖಮಾಪುರ, ಕೊಣ್ಣೂರ, ಕುವಿನಕೊಪ್ಪ, ಮೆಣಸಗಿ ಗ್ರಾಮಗಳಿಗೆ ನೀರು ನುಗ್ಗಿದೆ. ಗದಗ ಜಿಲ್ಲೆಯ 16 ಗ್ರಾಮಗಳ ಜನರು ಕಂಗಾಲಾಗಿದ್ದಾರೆ. ಬಳ್ಳಾರಿ ಜಿಲ್ಲೆಯಲ್ಲಿ ಮಳೆಯಾಗಿಲ್ಲ. ಆದರೆ ಹೊಸಪೇಟೆಯಲ್ಲಿರುವ ತುಂಗಭದ್ರಾ ಜಲಾಶಯ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ 20 ಕ್ರಸ್ಟ್ ಗೇಟ್‍ಗಳ ಮೂಲಕ 50 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ. ನಾಳೆ ಸಂಜೆ ಹೊತ್ತಿಗೆ 1 ಲಕ್ಷ ಕ್ಯೂಸೆಕ್ ಬಿಡುವ ಸಾಧ್ಯತೆ ಇದ್ದು, ಹಂಪಿ ಸ್ಮಾರಕ ಮತ್ತು ಕಂಪ್ಲಿ ಸೇತುವೆ ಮುಳುಗಡೆಯಾಗುವ ಭೀತಿ ಇದೆ. ಹೀಗಾಗಿ ನದಿ ಪಾತ್ರದ ಜನರಿಗೆ ಎಚ್ಚರಿಕೆ ನೀಡಲಾಗಿದೆ.