ಬಳ್ಳಾರಿ: ಸಾಮಾನ್ಯವಾಗಿ ಕಾಡು ಪ್ರಾಣಿಗಳನ್ನು ನೋಡಬೇಕೆಂದರೆ, ಅದರಲ್ಲೂ ಹುಲಿ, ಬಿಳಿ ಹುಲಿ ಕಾಣಲು ಮೈಸೂರು ಮೃಗಾಲಯಗೆ ಹೋಗಬೇಕಾದ ಅನಿವಾರ್ಯತೆ ಇತ್ತು. ಆದರೆ ಮೈಸೂರು ಮೃಗಾಲಯದಿಂದ ಕಳೆದ ವಾರ 7 ವರ್ಷದ ಅರ್ಜುನ ಎಂಬ ಹೆಸರಿನ ಬಿಳಿ ಹುಲಿ ಜೊತೆಗೆ 7 ತೋಳಗಳು ಬಳ್ಳಾರಿಯ ಹೊಸಪೇಟೆ ಬಳಿಯ ಹಂಪಿ ಬಳಿಯ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನಕ್ಕೆ ಆಗಮಿಸಿವೆ.
ಸದ್ಯ ಝೂನಲ್ಲಿ ಪಟ್ಟೆ ಹುಲಿ, ಜಿರಾಫೆ, ಕಾಡು ಕೋಣ, ಆನೆ, ಸಿಂಹ ಸೇರಿ ನಾನಾ ವನ್ಯ ಜೀವಿಗಳಿವೆ. ಈ ಸಾಲಿಗೆ ಬಿಳಿ ಹುಲಿಯೂ ಸೆರ್ಪಡೆಯಾಗಿರುವುದು ಪ್ರಾಣಿ ಪ್ರಿಯರ ಸಂತಸ ಹೆಚ್ಚಿಸಿದೆ. ಬಳ್ಳಾರಿಯ ಬಿಸಿಲಿನ ವಾತಾವರಣ ಇದುವ ಕಾರಣ ಹಾಲಿ ಇರುವ ಹುಲಿಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದಕ್ಕೆ ಸಮಯ ಹಿಡಿಯಲಿದ್ದು, ಕೆಲ ದಿನಗಳವರೆಗೆ ಹುಲಿ ಚಲನವಲನದ ಮೇಲೆ ನಿಗಾ ವಹಿಸಬೇಕು. ವಾತಾವರಣ ಬದಲಾಗುವುದರಿಂದ ನಿತ್ಯ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿದೆ.
ಹುಲಿ ಆಗಮಿಸಿ 10 ದಿನ ಕಳೆದಿದ್ದು, ನಿಧಾನವಾಗಿ ಇಲ್ಲಿನ ವಾತಾವರಣಕ್ಕೆ ಹೊಂದಿಕೊಳ್ಳುತ್ತಿದೆ ಎಂದು ಮೃಗಾಲಯ ಅಧಿಕಾರಿಗಳ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ 9 ಪ್ರಾಣಿ ಮೃಗಾಲಯಗಳಿದ್ದು, ಈ ಪೈಕಿ ಮೈಸೂರು ಮೃಗಾಲಯದಲ್ಲಿ ಮಾತ್ರ ಬಿಳಿ ಹುಲಿಯಿದೆ. ಅಲ್ಲಿಯೇ ಕ್ರಾಸ್ ಬ್ರೀಡ್ ಮಾಡಿದ 7ವರ್ಷದ ಗಂಡು ಬಿಳಿ ಹುಲಿಯನ್ನು ಕಮಲಾಪೂರದ ಅಟಲ್ ಬಿಹಾರಿ ವಾಜಪೇಯಿ ಜಿಯಾಲಾಜಿಕಲ್ ಉದ್ಯಾನವನಕ್ಕೆ ಕರೆ ತರಲಾಗಿದೆ. ಹಂಪಿಗೆ ಬರುವ ಪ್ರವಾಸಿಗರು ವಾಜಪೇಯಿ ಜಿಯಾಲಾಜಿಕಲ್ ಪಾರ್ಕಿಗೆ ಭೇಟಿ ಕೊಡುತ್ತಾರೆ. ಕಾರಣ ಹಂಪಿ ಮತ್ತಷ್ಟು ಪ್ರವಾಸಿಗರನ್ನು ತನ್ನತ್ತ ಸೆಳೆಯಲಿದೆ.