ಕಾರವಾರ: ಸರ್ಕಾರಿ ಆಸ್ಪತ್ರೆಯಲ್ಲಿ ಜವಾನನೇ ವೈದ್ಯನಾಗಿ ಬದಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ನಡೆದಿದೆ.
ದೀಪಕ್ ನಾಯ್ಕ ವೈದ್ಯನಾಗಿ ಬದಲಾದ ಜವಾನ, ಇಲ್ಲಿ ಮೊದಲಿನಿಂದಲೂ ವೈದ್ಯರ ನೇಮಕವಾಗದೇ ಸಾಕಷ್ಟು ಸಮಸ್ಯೆ ಎದುರಾಗಿತ್ತು. ಅಲ್ಲದೇ 12 ಸಿಬ್ಬಂದಿ ಇರಬೇಕಾದ ಆಸ್ಪತ್ರೆಯಲ್ಲಿ ಕೇವಲ ಇಬ್ಬರು ಮಾತ್ರ ಇದ್ದಾರೆ. ಬದಲಿ ವೈದ್ಯರು ಇದ್ದರೂ ಆಸ್ಪತ್ರೆಗೆ ಬರುವುದಿಲ್ಲ. ಕೊರೊನಾ ಸಂದರ್ಭವಾದರೂ, ಆಸ್ಪತ್ರೆ ಕಡೆಗೆ ವೈದ್ಯರು ಬರುವುದಿರಲಿ, ತಲೆಯನ್ನೂ ಹಾಕುವುದಿಲ್ಲ. ಹೀಗಾಗಿ ಇರುವ ಇಬ್ಬರು ಸಿಬ್ಬಂದಿಗೆನೇ ಔಷಧಿ ಬರೆದುಕೊಡುವಂತೆ ವೈದ್ಯರು ಹೇಳಿರುವುದಾಗಿ ಸ್ಥಳೀಯರು ದೂರಿದ್ದಾರೆ.
ಜವಾನನೇ ವೈದ್ಯನಂತಾಗಿರುವುದರಿಂದ ರೋಗಿಗಳಿಗೆ ನರ್ಸ್ ಮೂಲಕವೂ ತಪಾಸಣೆ ನಡೆಸದೇ, ಜವಾನನೇ ಚಿಕಿತ್ಸೆ ನೀಡುತಿದ್ದಾರೆ. ರೋಗಿಗಳು ಬಂದರೆ ಅವರಿಗೆ ಏನು ತೊಂದರೆ ಎಂದು ಕೇಳಿ ತನಗೆ ಗೊತ್ತಿರುವ ಮಾತ್ರೆಯನ್ನು ಜವಾನ ನೀಡುತ್ತಾರೆ. ಬಿಪಿ, ಷುಗರ್ ರೋಗಿಗಳು ಬಂದರೆ ತನಗೆ ಗೊತ್ತಿರುವ ಮಾತ್ರೆ ನೀಡಿ ಕಳುಹಿಸುತಿದ್ದಾರೆ.
ಜಿಲ್ಲೆಯಲ್ಲಿ ವೈದ್ಯರ ಕೊರತೆ ಇದೆ. ಹೀಗಾಗಿ ಕಳೆದ ತಿಂಗಳು ಹೊಸದಾಗಿ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಅಂಕೋಲದ ಭಾಗದಲ್ಲಿ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರ ಇದಾಗಿದೆ. ಹೀಗಿದ್ದರೂ ವೈದ್ಯರು ನಿರ್ಲಕ್ಷ್ಯ ತೋರುತ್ತಿದ್ದಾರೆ. ಸ್ಥಳೀಯರು ಜಿಲ್ಲಾ ಆರೋಗ್ಯ ಇಲಾಖೆಗೆ ದೂರು ನೀಡಿದರೂ ಕ್ರಮ ಜರುಗಿಸುತ್ತಿಲ್ಲ. ಕೊರೊನಾ ಸಮಯದಲ್ಲಿಯೂ ಇಲ್ಲಿರೋ ವೈದ್ಯರು ಸೇವೆಯಲ್ಲಿ ಇರದಿರುವುದಕ್ಕೆ ಸ್ಥಳೀಯರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ. ಜವಾನ ತನಗೆ ತೋಚಿದ ಔಷಧಿ ನೀಡಿ, ಮುಂದೆ ರೋಗಿಗಳಿಗೆ ತೊಂದರೆ ಆದರೆ ಗತಿ ಏನು ಎಂಬ ಆತಂಕ ಸ್ಥಳೀಯರದ್ದು. ಈ ಬಗ್ಗೆ ಅಂಕೋಲದ ಪ್ರತಾಪ್ ದುರ್ಗೇಕರ್ ಅವರು ಇಲ್ಲಿನ ಆಸ್ಪತ್ರೆ ಸಮಸ್ಯೆ ಬಗ್ಗೆ ದೂರು ಸಹ ನೀಡಿದ್ದಾರೆ, ಆದರೂ ಪ್ರಯೋಜನವಾಗಿಲ್ಲ.