ಕಾರವಾರ: ಬೆಂಗಳೂರಿನ ಯಶವಂತಪುರ ನಿಲ್ದಾಣ ಹಾಗೂ ಕಾರವಾರ ನಡುವೆ ಹಗಲು ರೈಲು ಆ.16ರಿಂದ ಪುನಃ ಸಂಚಾರ ಆರಂಭಿಸಲಿದ್ದು, ಈ ಬಾರಿ ಗಾಜಿನ ಚಾವಣಿ ಹೊಂದಿರುವ ವಿಸ್ಟಾಡೋಮ್ ಬೋಗಿಗಳು ರೈಲಿನ ಆಕರ್ಷಣೆಯಾಗಿವೆ. ಇದರಿಂದಾಗಿ ಪಶ್ಚಿಮ ಘಟ್ಟ ಸಾಲಿನ ಹಸಿರು ಸಿರಿಯನ್ನು ಪ್ರವಾಸಿಗರು ಸವಿಯಬಹುದಾಗಿದೆ.
ಈ ಹಿಂದೆ ಸಂಚರಿಸುತ್ತಿದ್ದ ರೈಲನ್ನು ಪ್ರಯಾಣಿಕರ ಕೊರತೆಯ ಕಾರಣದಿಂದ ಕಾರವಾರದ ಬದಲು ಮಂಗಳೂರಿಗೆ ಸೀಮಿತಗೊಳಿಸಲಾಗಿತ್ತು. ಅಲ್ಲಿಂದಲೇ ಮರು ಪ್ರಯಾಣ ಶುರುವಾಗುತ್ತಿತ್ತು. ಆ.17ರಿಂದ ಮುಂದಿನ ಸೂಚನೆಯವರೆಗೆ ರೈಲು ಸಂಖ್ಯೆ 06211 ಕಾರವಾರದಿಂದ ವಾರದಲ್ಲಿ ಮೂರು ದಿನ ಸಂಚರಿಸಲಿದೆ. ರೈಲು ಉತ್ತರ ಕನ್ನಡದ ಪ್ರವಾಸಿ ಸ್ಥಳಗಳಾದ ಮುರುಡೇಶ್ವರ, ಗೋಕರ್ಣ ಮತ್ತು ಅಂಕೋಲಾದಲ್ಲಿ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಲಾಗಿದೆ.
ಕಾರವಾರದಿಂದ ಮಂಗಳವಾರ, ಗುರುವಾರ ಹಾಗೂ ಶನಿವಾರ ಯಶವಂತಪುರಕ್ಕೆ ಸಂಚರಿಸಲಿದೆ. ಸೋಮವಾರ, ಬುಧವಾರ ಮತ್ತು ಶುಕ್ರವಾರ ಕಾರವಾರಕ್ಕೆ ತಲುಪಲಿದೆ. ಒಟ್ಟು 14 ಬೋಗಿಗಳಲ್ಲಿ ಎರಡು ವಿಸ್ಟಾಡೋಮ್, ಒಂದು ಹವಾನಿಯಂತ್ರಿತ, ಒಂಬತ್ತು ಸಾಮಾನ್ಯ ಬೋಗಿಗಳು ಇರಲಿವೆ.