ಕಾರವಾರ: ಮಳೆಗಾಲದ ಹಿನ್ನೆಲೆಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವುದರಿಂದ ಸಮುದ್ರದಲ್ಲಿ ಯಾಂತ್ರೀಕೃತ ಮೀನುಗಾರಿಕೆ ದೋಣಿಗಳ ಮೂಲಕ ಮೀನುಗಾರಿಕೆಯನ್ನು ಜೂನ್ 1ರಿಂದ ಜುಲೈ 31ರವರೆಗೆ ಒಟ್ಟು 61 ದಿನ ನಿಷೇಧಿಸಲಾಗಿದೆ.
ಈ ಅವಧಿಯಲ್ಲಿ ಕೇವಲ ದೋಣಿಗಳ ಚಲನವಲನಕ್ಕಾಗಿ 10 ಅಶ್ವಶಕ್ತಿಯವರೆಗಿನ ಸಾಮಥ್ರ್ಯದ ಮೋಟಾರೀಕೃತ ದೋಣಿ ಹಾಗೂ ಸಾಂಪ್ರದಾಯಿಕ, ನಾಡದೋಣಿಗಳಿಗೆ ಅವಕಾಶ ಮಾಡಿಕೊಡಲಾಗಿದೆ. ಅವುಗಳ ಮೂಲಕ ಸಮುದ್ರದಲ್ಲಿ ಐದು ನಾಟಿಕನ್ ಮೈಲು ದೂರದ ವರೆಗೆ ಮೀನುಗಾರಿಕೆ ನಡೆಸಬಹುದಾಗಿದೆ.
ಇದನ್ನು ಉಲ್ಲಂಘಿಸಿದರೆ ಕರ್ನಾಟಕ ಕಡಲ ಮೀನು ಗಾರಿಕೆ (ನಿಯಂತ್ರಣ) ಕಾಯ್ದೆ 1986ರ ಅಡಿ ಕಾನುನು ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ ಒಂದು ವರ್ಷದ ಅವಧಿಗೆ ರಾಜ್ಯ ಮಾರಾಟ ಕರ ರಹಿತ ಡೀಸೆಲ್ ಪಡೆಯಲು ಮತ್ತು ಕೇಂದ್ರ ಅಬಕಾರಿ ತೆರಿಗೆ ಮರು ಪಾವತಿಯನ್ನು ಪಡೆಯಲು ಅನರ್ಹರಾಗಿತ್ತಾರೆ ಎಂದು ಉ.ಕ ಜಿಲ್ಲಾ ಮೀನುಗಾರಿಕೆ ಇಲಾಖೆ ಉಪನಿರ್ದೇಶಕ ಪಿ.ನಾಗರಾಜ್ ಎಚ್ಚರಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ಜಿಲ್ಲೆಯ ಬಂದರುಗಳಿಗೆ ಆಗಮಿಸುತ್ತಿದ್ದು, ಲಂಗುರು ಹಾಕಲಾಗುತ್ತಿದೆ. ಇನ್ನು ದೀರ್ಘಾವಧಿ ಬಂದ್ ಇರುವುದರಿಂದ ಮೀನುಗಾರರು ತಮ್ಮ ಕಾರ್ಯ ಸ್ಥಗಿತಗೊಳಿಸಿ ಬಲೆಗಳನ್ನು ಜೋಡಿಸುವುದರಲ್ಲಿ ನಿರತರಾಗಿದ್ದಾರೆ.