– ಪ್ರವಾಸೋದ್ಯಮ ನಂಬಿದವರ ಬದುಕು “ಹಸಿರು”
– ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಕಾರಣವೇನು?
ಕಾರವಾರ: ಇಲ್ಲಿನ ಕರಾವಳಿ ಮಲೆನಾಡು ಪ್ರದೇಶಗಳು ಪ್ರಕೃತಿ ಸೌಂದರ್ಯದಿಂದ ಪ್ರವಾಸಿಗರನ್ನು ತನ್ನತ್ತ ಕೈ ಬೀಸಿ ಕರೆಯುತ್ತದೆ. ಆದರೆ ಕಳೆದ ಒಂದು ವರ್ಷದಿಂದ ಕೊರೊನಾ ಕರಿ ಛಾಯೆ ಜಿಲ್ಲೆಯ ಪ್ರವಾಸೋದ್ಯಮಕ್ಕೆ ಹೊಡೆತ ಕೊಟ್ಟಿತ್ತು. ಲಾಕ್‍ಡೌನ್ ಸಂದರ್ಭದಲ್ಲಿ ಪ್ರವಾಸೋದ್ಯಮ ಚಟುವಟಿಕೆಗೆ ನಿರ್ಬಂಧ ವಿಧಿಸಲಾಗಿತ್ತು. ಲಾಕ್‍ಡೌನ್ ಸಡಿಲಿಕೆಯಿಂದಾಗಿ ಜಿಲ್ಲೆಯ ಮುರುಡೇಶ್ವರ, ಗೋಕರ್ಣ, ದಾಂಡೇಲಿ ಭಾಗಗಳಿಗೆ ಪ್ರವಾಸಿಗರ ದಂಡು ಹರಿದುಬಂದಿದ್ದು ಕಳೆದ ವರ್ಷದ ದಾಖಲೆಯನ್ನು ಮುರಿದುಹಾಕಿದೆ.
Advertisement
ಜಿಲ್ಲೆಯಲ್ಲಿ 2020 ಪೆಬ್ರವರಿಯಲ್ಲಿ 3.9 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದರು. ಈ ಬಾರಿ ಪೆಬ್ರವರಿಯಲ್ಲಿ 5.6 ಲಕ್ಷ ಜನ ಭೇಟಿ ನೀಡಿದ್ದಾರೆ. ಇನ್ನು 2020ರ ಮಾರ್ಚ್ ನಲ್ಲಿ 2.3 ಲಕ್ಷ ಜನ ಪ್ರವಾಸಿಗರು ಭೇಟಿ ನೀಡಿದರೆ, ಈ ವರ್ಷದ ಮಾರ್ಚ್ ಗೆ 5.6 ಲಕ್ಷ ಜನ ಭೇಟಿ ನೀಡಿದ್ದಾರೆ ಎಂದು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ಪುರುಷೋತ್ತಮ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
Advertisement
Advertisement
ಪ್ರವಾಸಿಗರ ಸಂಖ್ಯೆ ಹೆಚ್ಚಾಗಲು ಕಾರಣವೇನು?
ಉತ್ತರ ಕನ್ನಡ ಜಿಲ್ಲೆಯ ಭಾಗದಲ್ಲಿ ಹಲವು ಪ್ರವಾಸಿ ಸ್ಥಳಗಳಿವೆ. ಆದರೆ ಕರಾವಳಿ ಭಾಗದ ಗೋಕರ್ಣ, ಮುರುಡೇಶ್ವರ, ಮಲೆನಾಡು ಭಾಗದ ದಾಂಡೇಲಿ ಭಾಗಕ್ಕೆ ಅತೀ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.
Advertisement
ಪ್ರವಾಸೋದ್ಯಮ ಇಲಾಖೆ ಹೇಳುವಂತೆ ಜಿಲ್ಲೆಯಲ್ಲಿ ಕೊರೊನಾ ನಿಯಮ ಕಠಿಣ ಜಾರಿಯಿದ್ದರೂ ಪ್ರವಾಸಿ ಸ್ಥಳಗಳಿಗೆ ನಿರ್ಬಂಧ ಹೇರಲಾಗಿರಲಿಲ್ಲ. ಹೀಗಾಗಿ ವರ್ಕ ಫ್ರಮ್ ಹೋಮ್ ಕೆಲಸ ನಿರ್ವಹಿಸುವ ಉದ್ಯೋಗಿಗಳು ನೆಟ್ ವರ್ಕ್ ಹೆಚ್ಚು ಸಿಗುವ ಪ್ರಶಾಂತ ಸ್ಥಳಗಳನ್ನು ಆಯ್ಕೆ ಮಾಡಿಕೊಂಡು ಬರುತಿದ್ದರು. ಇದರಲ್ಲಿ ಉತ್ತರ ಕನ್ನಡ ಜಿಲ್ಲೆ ಬರುವ ಪ್ರವಾಸಿಗರಿಗೆ ಸೇಫ್ ಎಂದು ಅನಿಸಿದೆ. ಹೀಗಾಗಿ ತಿಂಗಳುಗಟ್ಟಲೇ ಈ ಉದ್ಯೋಗಿಗಳು ಈ ಭಾಗದಲ್ಲಿ ಇದ್ದುಕೊಂಡು ಕಾರ್ಯ ಮಾಡುವ ಜೊತೆ ಬಿಡುವಿನ ವೇಳೆಯಲ್ಲಿ ಪ್ರವಾಸಿ ಸ್ಥಳವನ್ನು ಕುಟುಂಬದ ಜೊತೆ ಭೇಟಿ ನೀಡುತಿದ್ದರು. ಹೀಗಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಇದಲ್ಲದೇ ದೊಡ್ಡ ದೊಡ್ಡ ಕಂಪನಿಗಳು ಸಹ ಕೆಲಸಕ್ಕೆ ಜಿಲ್ಲೆಯ ಪ್ರವಾಸಿ ಸ್ಥಳಗಳನ್ನು ಆಯ್ಕೆ ಮಾಡಿ ತಮ್ಮ ಉದ್ಯೋಗಿಗಳನ್ನು ಕಳುಹಿಸಿಕೊಡುತ್ತಿತ್ತು. ಜೊತೆಗೆ ಲಾಕ್‍ಡೌನ್ ನಿಂದ ಬೇಸತ್ತ ಜನ ಕರಾವಳಿ ಭಾಗಕ್ಕೆ ಅತೀ ಹೆಚ್ಚು ಬರುತ್ತಿರುವುದು ಸಹ ಪ್ರವಾಸಿಗರ ಸಂಖ್ಯೆಯಲ್ಲಿ ಏರಿಕೆ ಕಂಡಿದೆ.
ಪ್ರವಾಸೋದ್ಯಮ ನಂಬಿದವರ ಬದುಕು “ಹಸಿರು”
ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಹೋಮ್ ಸ್ಟೇಗಳು, ರೆಸಾರ್ಟ್, ಸರ್ಕಾರಿ ಅತಿಥಿ ಗೃಹಗಳು ಒಂದಲ್ಲಾ ಒಂದು ಕಾರಣದಿಂದ ತುಂಬುತ್ತಿದೆ. ವೀಕೆಂಡ್ ಬಂತೆಂದರೇ ಪ್ರವಾಸಿಗರಿಗೆ ವಸತಿ ಗೃಹಗಳು ಸಿಗುವುದೇ ಕಷ್ಟದಾಯಕ. ಪ್ರತಿ ದಿನ ಸಾವಿರಾರು ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುವ ಸಂಖ್ಯೆ ಏರಿಕೆ ಕಂಡಿದೆ. ಇದರ ನಡುವೆ ಜಿಲ್ಲಾಡಳಿತ ಕೂಡ ಪ್ರವಾಸಿಗರಿಗೆ ತೊಂದರೆಯಾಗದಂತೆ ವ್ಯವಸ್ತೆ ಸಹ ಕಲ್ಪಿಸುತ್ತಿದೆ. ಹೀಗಾಗಿ ಇದನ್ನು ನಂಬಿದ ವ್ಯಾಪಾರಿಗಳು, ಕಾರ್ಮಿಕರು ಸಂಕಷ್ಟದ ನಡುವೆಯೂ ಆರ್ಥಿಕ ಚೇತರಿಕೆ ಕಾಣುತ್ತಿದ್ದು ಜಿಲ್ಲೆಯಲ್ಲಿ ಪ್ರವಾಸಿಗರ ಸಂಖ್ಯೆ ಏರಿಕೆ ಕಾಣುತ್ತಿದೆ.