ಕಾರವಾರ: ಉತ್ತರ ಕನ್ನಡ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೊಹಮ್ಮದ್ ರೋಶನ್ ಅವರಿಗೆ ಕೊರೊನಾ ಸೋಂಕು ದೃಢಪಟ್ಟಿದೆ.
ಸೋಂಕಿನ ಲಕ್ಷಣಗಳು ಕಾಣಿಸಿಕೊಂಡ ಕಾರಣ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ (ಕ್ರಿಮ್ಸ್) ಪ್ರಯೋಗಾಲಯಕ್ಕೆ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದರು. ಈ ವೇಳೆ ಪರೀಕ್ಷೆಯಲ್ಲಿ ಸೋಂಕು ತಗುಲಿರುವುದು ದೃಢಪಟ್ಟಿದೆ.
ಇತ್ತೀಚಿಗಷ್ಟೇ ಅವರ ಪತ್ನಿಗೆ ಹೆರಿಗೆ ಆಗಿದ್ದು, ಒಂದು ತಿಂಗಳ ಪುಟ್ಟ ಕಂದಮ್ಮ ಕೂಡ ಮನೆಯಲ್ಲಿದೆ. ಸದ್ಯ ಪ್ರತ್ಯೇಕ ಕೋಣೆಯಲ್ಲಿ ಸಿಇಓ ಅವರು ಹೋಮ್ ಐಸೋಲೇಶನ್ ಆಗಿದ್ದು, ಮಗು ಹಾಗೂ ತಾಯಿಯ ಗಂಟಲು ದ್ರವವನ್ನೂ ಪರೀಕ್ಷೆಗೆ ಕಳುಹಿಸಲಾಗಿದೆ. ಮಧ್ಯಾಹ್ನದ ವೇಳೆಗೆ ಫಲಿತಾಂಶ ಬರುವ ಸಾಧ್ಯತೆ ಇದ್ದು, ಈ ಬಗ್ಗೆ ಸ್ವತಃ ಸಿಇಓ ಕೂಡ ಆತಂಕದಲ್ಲಿದ್ದಾರೆ.
ನನ್ನ ವರದಿಯಲ್ಲಿ ಪಾಸಿಟಿವ್ ಬಂದಿದ್ದು, ಲಕ್ಷಣ ಕಾಣಿಸಿಕೊಂಡ ದಿನದಿಂದ ಹೋಮ್ ಕ್ವಾರಂಟೈನ್ ಇದ್ದೇನೆ. ಆದರೂ ನನ್ನನ್ನು ಕಳೆದ ಮೂರು ದಿನಗಳಲ್ಲಿ ಯಾರಾದರೂ ಸಂಪರ್ಕಿಸಿದ್ದರೆ ದಯವಿಟ್ಟು ಸಮೀಪದ ಆಸ್ಪತ್ರೆಗಳಿಗೆ ಭೇಟಿ ನೀಡಿ ಪರೀಕ್ಷಿಸಿಕೊಳ್ಳಿ ಎಂದು ಮೊಹಮ್ಮದ್ ರೋಶನ್ ಮನವಿ ಮಾಡಿಕೊಂಡಿದ್ದಾರೆ.
ಕೊರೊನಾ ಆರಂಭದ ದಿನದಿಂದಲೂ ಜಿಲ್ಲೆಯ ಮೂಲೆ ಮೂಲೆಗೆ ಸಂಚರಿಸಿ ಸೋಂಕು ಹರಡದಂತೆ ತಡೆಗಟ್ಟಲು ಇವರು ಸಾಕಷ್ಟು ಶ್ರಮವಹಿಸಿದ್ದರು. ಭಟ್ಕಳದಲ್ಲಿ ಭಯದಿಂದ ಆರೋಗ್ಯ ಕಾರ್ಯಕರ್ತರು ಕರ್ತವ್ಯಕ್ಕೆ ಹಿಂಜರಿಯುತ್ತಿದ್ದ ಸಂದರ್ಭದಲ್ಲಿ ಅವರಿಗೆ ಧೈರ್ಯ ತುಂಬುವ ಜೊತೆ ತಾವೇ ಭಟ್ಕಳದಲ್ಲಿ ಇರುವ ಮೂಲಕ ಕೆಲಸ ಮಾಡಿದ್ದರು. ಕಾರವಾರದಲ್ಲಿ ಕೋವಿಡ್ ವಾರ್ಡ್ ಗಳ ಸ್ಥಾಪನೆಯಿಂದ ಹಿಡಿದು, ಸೋಂಕಿತರ ಯೋಗಕ್ಷೇಮ ವಿಚಾರಿಸಿಕೊಳ್ಳುವ ಕಾರ್ಯವನ್ನೂ ಬಹಳ ಮುತುವರ್ಜಿಯಿಂದ ಮೊಹಮ್ಮದ್ ರೋಶನ್ ಮಾಡಿದ್ದರು.
ಅಧಿಕಾರಿಗಳು, ಸಿಬ್ಬಂದಿಯಲ್ಲಿದ್ದ ಕೊರೊನಾ ಆತಂಕ ದೂರ ಮಾಡಲು ಸ್ವತಃ ತಾವೇ ಕಾರ್ಯಾಚರಣೆಗಿಳಿದು ಜಿಲ್ಲೆಯ ಜನರಿಂದ ಪ್ರಶಂಸೆಗೊಳಗಾಗಿದ್ದರು. ಗ್ರಾಮ ಮಟ್ಟದಲ್ಲಿ ಟಾಸ್ಕ್ ಫೋರ್ಸ್ ರಚನೆ ಸೇರಿದಂತೆ ಒಟ್ಟಾರೆ ಕೊರೋನಾ ಸಂದರ್ಭದಲ್ಲಿ ಅತ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸಿ ಮೇಲಧಿಕಾರಿಗಳಿಂದಲೂ ಇವರಿಗೆ ಶ್ಲಾಘನೆ ವ್ಯಕ್ತವಾಗಿತ್ತು.