ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದಲ್ಲಿ ಮಳೆಯ ಅಬ್ಬರಕ್ಕೆ ಕಳಸಾಯಿ ಬಳಿ ರಸ್ತೆ ಕುಸಿತವಾಗಿದ್ದು, ಅಂಬೂಳ್ಳಿ ಕ್ರಾಸ್ ನಿಂದ ಕುಂಬಾರವಾಡಾ ಕ್ರಾಸ್ ವರೆಗೆ ಸಂಚಾರವನ್ನು ನಿರ್ಬಂಧಿಸಲಾಗಿದೆ.
ಮಳೆ ಹೆಚ್ಚಾದ ಹಿನ್ನಲೆಯಲ್ಲಿ ಕುಂಬಾರವಾಡಾ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಳವಿ-ಡಿಗ್ಗಿ ಹೆದ್ದಾರಿಯ ಕಳಸಾಯಿ ಹತ್ತಿರ ಘಟನೆ ನಡೆದಿದ್ದು, ರಸ್ತೆಯ ಪಕ್ಕದಲ್ಲಿ ದೊಡ್ಡದಾಗಿ ಭೂ ಕುಸಿತವಾಗಿದೆ. ಈ ಹಿನ್ನಲೆಯಲ್ಲಿ ಅಂಬೂಳ್ಳಿ ಕ್ರಾಸ್ ನಿಂದ ಕುಂಬಾರವಾಡಾ ಕ್ರಾಸ್ ವರೆಗೆ ಸಂಚಾರವನ್ನು ಸಂಪೂರ್ಣ ನಿರ್ಬಂಧಿಸಲಾಗಿದೆ. ಇದರಿಂದಾಗಿ ಕುಂಬಾರವಾಡಾದಿಂದ ಉಳವಿಗೆ ಹೊಗುವ ರಸ್ತೆ ಬಂದ್ ಆಗಿದೆ.
ಸ್ಥಳಕ್ಕೆ ಕಾರವಾರ ಉಪ ವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬೆಳಗಿನಿಂದ ಬಿಡುವು ಕೊಟ್ಟಿದ್ದ ಮಳೆರಾಯ ಮಧ್ಯಾಹ್ನದ ನಂತರ ಮಲೆನಾಡು ಸೇರಿದಂತೆ ಕರಾವಳಿ ಭಾಗದಲ್ಲಿ ಅಬ್ಬರಿಸಿದ್ದು, ಗಾಳಿ ಸಹಿತ ಅಬ್ಬರದ ಮಳೆ ಜಿಲ್ಲೆಯಾದ್ಯಂತ ಮುಂದುವರಿದಿದೆ.
ಮಳೆ ಹೆಚ್ಚಿದ ಹಿನ್ನಲೆಯಲ್ಲಿ ಜಿಲ್ಲೆಯ ಕಾರವಾರದ ಕದ್ರಾ, ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಜಲಾಶಯಗಳಿಂದ ನೀರು ಬಿಡುಗಡೆ ಮಾಡಲಾಗಿದೆ. ಕದ್ರಾ ಜಲಾಶಯದ ಆರು ಗೇಟ್‍ಗಳ ಮೂಲಕ 18,155 ಕ್ಯೂಸೆಕ್ಸ್ ನೀರು ಹೊರಕ್ಕೆ ಬಿಡಲಾಗಿದ್ದು, ಜಲಾಶಯದ ಒಳಹರಿವು 15,212 ಕ್ಯೂಸೆಕ್ಸ್ ಇದೆ. ಗರಿಷ್ಠ 34.50 ಮೀಟರ್ ಸಾಮಥ್ರ್ಯದ ಜಲಾಶಯ ಇದಾಗಿದ್ದು, ಸದ್ಯ ಕದ್ರಾ ಡ್ಯಾಮ್ ನಲ್ಲಿ 31.32 ಮೀಟರ್ ನೀರು ಭರ್ತಿಯಾಗಿದೆ.
ಯಲ್ಲಾಪುರ ತಾಲೂಕಿನ ಕೊಡಸಳ್ಳಿ ಜಲಾಶಯದ ಒಳ ಹರಿವು 7,455 ಕ್ಯೂಸೆಕ್ಸ್ ಇದ್ದು, 7,970 ಕ್ಯೂಸೆಕ್ಸ್ ನೀರನ್ನು ಬಿಡುಗಡೆ ಮಾಡಲಾಗಿದೆ. ಜಲಾಶಯವು ಗರಿಷ್ಠ 75.50 ಮೀಟರ್ ಸಂಗ್ರಹಣ ಸಾಮಥ್ರ್ಯ ಹೊಂದಿದ್ದು, ಸದ್ಯ 71.55 ಮೀಟರ್ ಭರ್ತಿ ಹಿನ್ನಲೆಯಲ್ಲಿ ನೀರು ಬಿಡುಗಡೆ ಮಾಡಲಾಗಿದೆ ಎಂದು ಕೆಪಿಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಎರಡೂ ಜಲಾಶಯದಲ್ಲಿ ನೀರು ಬಿಟ್ಟಿರುವುದರಿಂದ ಕಾಳಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ. ಈ ಹಿನ್ನಲೆಯಲ್ಲಿ ಜಲಾಶಯ ವ್ಯಾಪ್ತಿಯ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.