ಕಾರವಾರ: ತೌಕ್ತೆ ಚಂಡಮಾರುತದಿಂದಾಗಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶ ತತ್ತರಿಸಿತ್ತು. ಚಂಡಮಾರುತದಿಂದ ಜನ ಚೇತರಿಸಿಕೊಳ್ಳುತ್ತಿರುವಾಗಲೇ ಮುಂಗಾರು ಮಳೆಯ ಅಬ್ಬರ ಜಿಲ್ಲೆಯಲ್ಲಿ ಹೆಚ್ಚಾಗಿದೆ. ಮಳೆಯ ಆರ್ಭಟಕ್ಕೆ 166 ಗ್ರಾಮಗಳಲ್ಲಿ ಪ್ರವಾಹ ಸಂಭವಿಸಬಹುದು ಎಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ತಿಳಿಸಿದ್ದಾರೆ.
Advertisement
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆ ಆರ್ಭಟ ಹೆಚ್ಚಾಗಿದ್ದರಿಂದ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದ್ದು, 234 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ 16,826 ಜನರಿಗೆ ಆಶ್ರಯ ಕಲ್ಪಿಸಬಹುದಾಗಿದ್ದು, ಸಂಪೂರ್ಣ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾಳಿ, ಶರಾವತಿ ನದಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆ ನೀಡಲಾಗಿದ್ದು, ಜನರನ್ನು ತೀರ ಪ್ರದೇಶದಿಂದ ಬೇರೆಡೆ ಸ್ಥಳಾಂಯರಿಸಲು ಸಹ ವ್ಯವಸ್ಥೆ ಮಾಡಿಕೊಳ್ಳಲಾಗಿದೆ ಎಂದರು.
Advertisement
Advertisement
ಕಳೆದ ಎರಡು ದಿನಗಳಿಂದ ಬಿಡುವು ಕೊಟ್ಟಿದ್ದ ಮಳೆ ಇಂದು ಮಧ್ಯಾಹ್ನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಮತ್ತೆ ಸುರಿಯುತ್ತಿದ್ದು, ಕಾರವಾರ ಸೇರಿದಂತೆ ಕರಾವಳಿ ಭಾಗದಲ್ಲಿ ಬಿಸಿಲು -ಮಳೆಯ ಆಟ ಪ್ರಾರಂಭವಾಗಿದೆ. ಮಲೆನಾಡು ಭಾಗದಲ್ಲಿ ಸಹ ಅಲ್ಲಲ್ಲಿ ಅಬ್ಬರದ ಮಳೆ ಸುರಿದಿದೆ. ಹೆಚ್ಚು ಮಳೆ ಸುರಿದಿದ್ದರಿಂದ ಜಿಲ್ಲೆಯ ಜಲಾಶಯಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು, ಕದ್ರಾ ಜಲಾಶಯ ಗರಿಷ್ಟ 34.50 ಮೀ., ಕನಿಷ್ಟ 30.10 ಮೀ. ಆಗಿದ್ದು, ಒಳ ಹರಿವು 20988.00 ಕ್ಯೂಸೆಕ್ಸ್ ಇದ್ದು, ಹೊರ ಹರಿವು 21588.0 ಕ್ಯೂಸೆಕ್ಸ್ ಇದೆ. ಇನ್ನು ಸೂಪಾ ಜಲಾಶಯದಲ್ಲಿ ಗರಿಷ್ಟ 564.00 ಮೀ., ಕನಿಷ್ಟ 539.16 ಮೀ., ಒಳ ಹರಿವು 5115.454 ಕ್ಯೂಸೆಕ್ಸ್, ಹೊರ ಹರಿವು 5115.454 ಕ್ಯೂಸೆಕ್ಸ್ ಇದೆ.