– ಮನೆಗಳಿಗೆ ನೀರು, ಸಂಚಾರ ವ್ಯವಸ್ಥೆ ಅಸ್ತವ್ಯಸ್ತ
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯ ಅವಾಂತರಗಳು ಮುಂದುವರಿದಿದೆ. ಇಂದು ಬಿಟ್ಟುಬಿಡದೇ ಬೆಳಗ್ಗಿನಿಂದ ವರುಣನ ಅಬ್ಬರ ಹೆಚ್ಚಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಹಾನಿ ಸಂಭವಿಸಿದೆ.
ಹೊನ್ನಾವರ ತಾಲೂಕಿನ ಗುಂಡಬಾಳ, ಭಾಸ್ಕೇರಿ, ಸಾಲ್ಕೋಡ್, ಬಡಗಣೆ ಹೊಳೆ ತುಂಬಿ ಹರಿಯುತ್ತಿದ್ದು, ಗುಂಡಬಾಳ, ಚಿಕ್ಕನಕೋಡ್, ಗುಂಡಿಬೈಲ್, ಹಾಡಗೇರಿ, ಮುಟ್ಟಾ, ಹಡಿನಬಾಳ, ಭಾಸ್ಕೇರಿ, ಗಜನಿಕೇರಿ, ದೊಡ್ಡಹಿತ್ತಲ್, ರ್ನಕೇರಿ, ಕೋಣಾರ್, ಕರ್ಕಿ, ಕಡತೋಕಾ ಭಾಗದ 200ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನಜೀವನ ಅಸ್ತವ್ಯಸ್ತವಾಗಿದೆ.
Advertisement
Advertisement
ಕಂದಾಯ, ಪೊಲೀಸ್ , ಪಂಚಾಯ್ತಿ ಅಧಿಕಾರಿಗಳು ಹಾಗೂ ನಿಯೋಜಿಸಲಾದ ನೋಡೆಲ್ ಅಧಿಕಾರಿಗಳು ಸ್ಥಳದಲ್ಲೇ ಬೀಡುಬಿಟ್ಟಿದ್ದು, ಸಂತ್ರಸ್ತರನ್ನು ಕಾಳಜಿ ಕೇಂದ್ರದತ್ತ ಕರೆದೊಯ್ಯುತ್ತಿದ್ದಾರೆ. ತಹಶೀಲ್ದಾರ್ ವಿವೇಕ ಶೇಣ್ವಿ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡುತ್ತಿದ್ದು, ಮಳೆ ಕಡಿಮೆಯಾಗುವವರೆಗೆ ಕಾಳಜಿ ಕೇಂದ್ರಕ್ಕೆ ಬರಲು ನೆರೆಯ ಭೀತಿ ಎದುರಿಸುತ್ತಿರುವ ಕುಟುಂಬಗಳಿಗೆ ಮನವಿ ಮಾಡಿದ್ದಾರೆ.
Advertisement
ಸರ್ಕಾರ ಸಕಲ ರೀತಿಯು ವ್ಯವಸ್ಥೆ ಕಲ್ಪಿಸಲು ಸಜ್ಜಾಗಿದೆ. ಕೊರೊನಾ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರಕ್ಕಾಗಿ ಹೆಚ್ಚುವರಿ ಕೊಠಡಿಗಳನ್ನು ಒದಗಿಸಲಾಗುವುದು. ಊಟ ವಸತಿಯ ಜೊತೆ ಆರೋಗ್ಯ ತಪಾಸಣೆ ಕೂಡ ನಡೆಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
Advertisement
ರಸ್ತೆ ಸಂಪರ್ಕ ಸ್ಥಗಿತ:
ಶಿರಸಿ- ಕುಮಟಾ ಹೆದ್ದಾರಿ ಜಲಾವೃತಗೊಂಡ ಹಿನ್ನೆಲೆಯಲ್ಲಿ ಹೆದ್ದಾರಿ ಸಂಚಾರವನ್ನು ತಾತ್ಕಾಲಿಕವಾಗಿ ಈ ಭಾಗದಲ್ಲಿ ಸ್ಥಗಿತಗೊಳಿಸಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ನದಿಗಳಲ್ಲಿ ನೀರು ಉಕ್ಕಿ ಹರಿಯುತ್ತಿರುವ ಕಾರಣ ಕುಮಟಾ ಕತಗಾಲ್ ಬಳಿ ಹೆದ್ದಾರಿಯ ಮೇಲೆ ನೀರು ನಿಂತಿದೆ. ಹೀಗಾಗಿ ಈ ಭಾಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಗುಡ್ಡ ಕುಸಿತ:
ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದ ಶಿರಸಿ, ಸಿದ್ದಾಪುರ ಭಾಗದಲ್ಲಿ ಅಬ್ಬರದ ಮಳೆ ಸುರಿಯುತ್ತಿದೆ. ಒಂದೆಡೆ ಶಿರಸಿಯ ಜಾಜಿ ಗುಡ್ಡೆ ಗ್ರಾಮದಲ್ಲಿ ಗುಡ್ಡ ಕುಸಿದು ಮನೆಗಳಿಗೆ ಹಾನಿ ಸಂಭವಿಸುವ ಭೀತಿ ಎದುರಾಗಿದೆ. ಈ ಭಾಗದಲ್ಲಿ ಎಂಟು ಕುಟುಂಬಗಳು ವಾಸವಿದ್ದು ಗುಡ್ಡ ಮತ್ತೆ ಕುಸಿಯುವ ಸಾಧ್ಯತೆಗಳಿದ್ದು ಕ್ಷಣದಲ್ಲಿ ಮನೆಗಳನ್ನು ಕಾಲಿ ಮಾಡುವಂತೆ ಶಿರಸಿ ತಾಹಶೀಲ್ದಾರ್ ನೋಟಿಸ್ ನೀಡಿದ್ದಾರೆ. ಆದರೆ ಈ ಮಳೆಯಲ್ಲಿ ವ್ಯವಸ್ಥೆಯನ್ನೇ ಕಲ್ಪಿಸದೇ ಸ್ಥಳಾಂತರವಾಗಲು ಹೇಳಿದ್ದರಿಂದ ಇಲ್ಲಿನ ಜನರು ಪರ್ಯಾಯ ವ್ಯವಸ್ಥೆ ಇಲ್ಲದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕುಮಟಾ ಭಾಗದ ಪ್ರಸಿದ್ಧ ಯಾಣ ಬೈರವೇಶ್ವರ ದೇವಾಲಯದಬಳಿ ಗುಡ್ಡ ಕುಸಿದು ಶಿಖರದ ಬಳಿಇರುವ ಮೂರು ಅಂಗಡಿಗಳ ಮೇಲೆ ಬಿದ್ದ ಭಾರೀ ಪ್ರಮಾಣದ ಮಣ್ಣು ಕುಸಿತ ಕಂಡಿದ್ದು ಯಾಣ ಕ್ಕೆ ಸಂಪರ್ಕ ಕಡಿತಗೊಂಡಿದೆ.