ಹಾಸನ: ನಮ್ಮ ನಿವಾಸದ ಮುಂದೆ ಉತ್ತವಾಗಿರುವ ರಸ್ತೆಯನ್ನು ಕಿತ್ತು, ಮತ್ತೆ ರಸ್ತೆ ಮಾಡುವ ಮೂಲಕ ಹಣ ಮಾಡುವ ದಂಧೆ ಮಾಡುತ್ತಿದ್ದಾರೆ ಎಂದು ಸಂಸದ ಪ್ರಜ್ವಲ್ ರೇವಣ್ಣ ಆಕ್ರೋಶ ಹೊರಹಾಕಿದ್ದಾರೆ.
ಹಾಸನದ ಆರ್ ಸಿ ರಸ್ತೆಯಲ್ಲಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ನಿವಾಸ ನೀಡಲಾಗಿದೆ. ಅವರ ನಿವಾಸದ ಮುಂದೆ ಸುಮಾರು 30 ಮೀಟರ್ ರಸ್ತೆಯನ್ನು ಕಿತ್ತು ಕಾಮಗಾರಿ ನಡೆಸಲಾಗುತ್ತಿದೆ. ಈ ಬಗ್ಗೆ ಆಕ್ರೋಶ ಹೊರಹಾಕಿರುವ ಸಂಸದ ಪ್ರಜ್ವಲ್ ರೇವಣ್ಣ, ಉತ್ತಮವಾಗಿರುವ ರಸ್ತೆ ಕಿತ್ತು ಕಳಪೆ ಕಾಮಗಾರಿಯಲ್ಲಿ ಪ್ಯಾಚ್‍ವರ್ಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಪ್ಯಾಚ್ ವರ್ಕ್ ಮಾಡುತ್ತಿರುವ ಸಮೀಪದಲ್ಲೇ ರಸ್ತೆ ಗುಂಡಿ ಬಿದ್ದಿದ್ದು, ಅದರ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಆದರೆ ಉತ್ತಮವಾಗಿರುವ ರಸ್ತೆಯನ್ನು ಕಿತ್ತು ಹಾಕಿದ್ದಾರೆ ಎಂದು ಎಡಿಸಿ ಕವಿತಾ ರಾಜಾರಾಮ್ ಅವರನ್ನು ಗುಂಡಿ ಬಿದ್ದಿರುವ ರಸ್ತೆ ಬಳಿ ಕರೆದುಕೊಂಡು ಹೋಗಿ ಆಕ್ರೋಶ ಹೊರಹಾಕಿದ್ದಾರೆ. ನಗರಸಭೆಯವರು ಹಣ ಮಾಡುವ ಉದ್ದೇಶದಿಂದ ಚೆನ್ನಾಗಿರುವ ರಸ್ತೆ ಕಿತ್ತು ಕಳಪೆ ಕಾಮಗಾರಿ ನಡೆಸುತ್ತಿದ್ದು, ಈ ಬಗ್ಗೆ ಸಮರ್ಪಕ ಉತ್ತರ ನೀಡದಿದ್ದರೆ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.