– 135 ವಿದ್ಯುತ್ ಕಂಬ ಧರೆಗೆ, ಎಂಟು ಮನೆಗೆ ಹಾನಿ
ಹಾಸನ: ಚಿಕ್ಕಮಗಳೂರು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹಾಸನ ಜಿಲ್ಲೆಯ ಬೇಲೂರಿನ ಸಮೀಪದಲ್ಲಿರುವ ಯಗಚಿ ಡ್ಯಾಂ ಭರ್ತಿಯಾಗುವ ಹಂತ ತಲುಪಿದೆ. ನದಿಗೆ ಸುಮಾರು 900 ಕ್ಯೂಸೆಕ್‍ಗೂ ಅಧಿಕ ನೀರು ಹರಿದು ಬರ್ತಿದೆ. ಇದೇ ರೀತಿ ಒಳಹರಿವು ಮುಂದುವರಿದರೆ ಅಣೆಕಟ್ಟೆ ಶೀಘ್ರವೇ ಭರ್ತಿಯಾಗಲಿದೆ.
ಯಗಚಿ ಅಣೆಕಟ್ಟೆ 964.60 ಮೀಟರ್ ಗರಿಷ್ಠ ಮಟ್ಟ ಹೊಂದಿದ್ದು, ಈಗಾಗಲೇ ಅಣೆಕಟ್ಟೆಯಲ್ಲಿ 963.90 ಮೀಟರ್ ಗಳಷ್ಟು ನೀರು ಸಂಗ್ರಹವಾಗಿದೆ. ಒಳಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಾದರೆ ಡ್ಯಾಂನಿಂದ ನೀರು ಬಿಡುಗಡೆ ಸಾಧ್ಯತೆಯಿದೆ. ಅಣೆಕಟ್ಟೆಯು 3.6 ಟಿಎಂಸಿಯಷ್ಟು ಗರಿಷ್ಟ ಸಂಗ್ರಹ ಸಾಮರ್ಥ್ಯ ಹೊಂದಿದ್ದು, ಇಂದು 3.31 ಟಿಎಂಸಿಯಷ್ಟು ಸಂಗ್ರಹವಿದೆ.
135 ವಿದ್ಯುತ್ ಕಂಬ ಧರೆಗೆ, ಎಂಟು ಮನೆಗೆ ಹಾನಿ:
ಜಿಲ್ಲೆಯಲ್ಲಿ ಜೂ.18 ರವರೆಗೆ ವಾಡಿಕೆಗಿಂತ ಶೇ.19 ರಷ್ಟು ಹೆಚ್ಚು ಮಳೆಯಾಗಿದ್ದು, ಇದುವರೆಗೂ ಯಾವುದೇ ಪ್ರಾಣ ಹಾನಿಯಾಗಿಲ್ಲ ಎಂದು ಜಿಲ್ಲಾಧಿಕಾರಿ ಆರ್.ಗಿರೀಶ್ ಹೇಳಿದ್ದಾರೆ. ಸಿಎಂ ವಿಡಿಯೋ ಕಾನ್ಫರೆನ್ಸ್ ನಂತರ ಮಾಹಿತಿ ನೀಡಿದ ಅವರು ಜೂನ್ 18 ರವರೆಗೆ 88.3 ಸೆ.ಮಿ. ವಾಡಿಕೆ ಮಳೆ ಆಗಬೇಕಿತ್ತು, 105.5 ಮಳೆಯಾಗಿದ್ದು, ವಾಡಿಕೆಗಿಂತ ಶೇ.19 ರಷ್ಟು ಮಳೆಯಾಗಿದೆ. ಇದನ್ನೂ ಓದಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ-ಮಲೆನಾಡು ಭಾಗದಲ್ಲಿ ಮನೆ ಕುಸಿತ
ಆಲೂರು, ಬೇಲೂರು, ಸಕಲೇಶಪುರದಲ್ಲಿ ಹೆಚ್ಚಿನ ಮಳೆಯಾಗಿದೆ. ಸಕಲೇಶಪುರದಲ್ಲಿ ವಾಡಿಕೆಗಿಂತ ಶೇ.89 ರಷ್ಟು ಹೆಚ್ಚು ಮಳೆಯಾಗಿದ್ದು, ಇದುವರೆಗೂ ಜಿಲ್ಲೆಯಲ್ಲಿ ಯಾವುದೇ ಪ್ರಾಣಹಾನಿ ಆಗಿಲ್ಲ ಎಂದರು. ಮಳೆಯಿಂದ ಜಿಲ್ಲೆಯಲ್ಲಿ ಒಟ್ಟು ಎಂಟು ಮನೆಗಳು ಕುಸಿದಿವೆ. ಸಕಲೇಶಪುರ ತಾಲ್ಲೂಕಿನ ಹಾನುಬಾಳು ಹೋಬಳಿಯ ದೋನಹಳ್ಳಿ ಗ್ರಾಮದ ಸೇತುವೆಗೆ ಹಾನಿಯಾಗಿದೆ. ಇದನ್ನೂ ಓದಿ: ಧಾರವಾಡ ಜಿಲ್ಲೆಯಲ್ಲಿ ಮಳೆ – ಕೆರೆಯ ಕಟ್ಟೆ ಒಡೆದು ನೂರಾರು ಎಕರೆ ಜಮೀನು ಜಲಾವೃತ!
ಕಳೆದ ವರ್ಷವೂ ಸೇತುವೆ ಕೊಚ್ಚಿ ಹೋಗಿತ್ತು. ಐವತ್ತು ಲಕ್ಷ ಅಂದಾಜು ಪಟ್ಟಿ ತಯಾರಿಸಿ ಪಂಚಾಯತ್ ರಾಜ್ ಇಲಾಖೆಗೆ ಕಳಿಹಿಸಲಾಗಿದೆ. ಜಿಲ್ಲೆಯಲ್ಲಿ ಮಳೆ ಗಾಳಿಗೆ 135 ವಿದ್ಯುತ್ ಕಂಬಗಳು ಬಿದ್ದಿವೆ. ದುರಸ್ಥಿ ಕಾರ್ಯ ಭರದಿಂದ ನಡೆಯುತ್ತಿದೆ. ಜಿಲ್ಲೆಯ ಯಾವುದೇ ಗ್ರಾಮದಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಿಲ್ಲ. ಅಗ್ನಿಶಾಮಕ ದಳ, ಅರಣ್ಯ ಇಲಾಖೆಗೆ ಎಲ್ಲಾ ರೀತಿಯ ಸಲಕರಣೆಗಳನ್ನು ಒದಗಿಸಿದ್ದೇವೆ. 95 ಗ್ರಾಮಗಳನ್ನು ಅತೀಸೂಕ್ಷ್ಮ ಎಂದು ಗುರುತಿಸಲಾಗಿದೆ ಎಂದರು.