ಉಡುಪಿ: ಎರಡು ವರ್ಷ ಎಂಬಿಎ ಪದವಿ ಮಾಡಿ ಮುಂಬೈ ಕಂಪನಿಯಲ್ಲಿ ಉದ್ಯೋಗ ಮಾಡುತ್ತಿದ್ದ ಯುವತಿ ಉಡುಪಿಗೆ ವಾಪಸ್ಸಾಗಿ ನೆಯ್ಗೆ ಮಾಡಿ ಸೀರೆ ತಯಾರಿಸುತ್ತಿದ್ದಾರೆ. ನಿಮಗೆ ಆಶ್ಚರ್ಯ ಆದರೂ ನಿಜ. ಸ್ವಂತದ್ದೇನಾದರೂ ಸಾಧನೆ ಮಾಡಬೇಕು. ಹುಟ್ಟಿದ ಊರಿಗೇನಾದ್ರು ಕೊಡುಗೆ ಕೊಡಬೇಕೆಂಬ ಹಂಬಲ ಮಹಾಲಸ ಕಿಣಿಯ ಈ ನಿರ್ಧಾರಕ್ಕೆ ಕಾರಣ.
ಬಣ್ಣ ಬಣ್ಣದ ಸೀರೆ, ಎಲ್ಲಾ ವಯಸ್ಸಿನವರನ್ನು ಸೆಳೆಯುವ ವಿನೂತನ ಪ್ಯಾಟರ್ನ್ ಗಳು, ಮಗ್ಗದ್ದಾ ಅಂತ ಮೂಗು ಮುರಿಯುವವರೂ ಇಷ್ಟಪಡುವ ಸೀರೆಗಳು. ಉಡುಪಿಯ ಮಣಿಪಾಲ ಮಹಾಲಸಾ ಕಿಣಿ ಎಂಬಿಎ ಪದವಿ ಮುಗಿಸಿರುವಾಕೆ. ಕಲಿದದ್ದು ಎಂಬಿಎ ಆದರೂ ಸೆಳೆದದ್ದು ಮಗ್ಗದ ಸೀರೆ. ಅದರಲ್ಲೂ ಉಡುಪಿ ಕೈಮಗ್ಗದ ಸೀರೆ.
Advertisement
Advertisement
ಎಂಬಿಎ ಪದವಿ ಬಳಿಕ ಉಡುಪಿ ಕೈಮಗ್ಗ ಸೀರೆಯತ್ತ ಆಸಕ್ತಿ ತಳೆದ ಈಕೆ, ಮಗ್ಗ ಖರೀದಿಸಲು ಮನಸ್ಸು ಮಾಡಿದ್ದಾರೆ. ನೇಕಾರ ಸಂಘ, ಮನೆಯಲ್ಲೇ ನೇಯುವ ಕುಟುಂಬಗಳನ್ನು ಸಂಪರ್ಕ ಮಾಡಿ ಮಗ್ಗ ಖರೀದಿ ಮಾಡಿದ್ದಾರೆ. ನಾಲ್ಕೈದು ತಿಂಗಳು ತರಬೇತಿ ಪಡೆದು ಮನೆಯಲ್ಲೇ ನೇಯಲು ಕಲಿತಿದ್ದಾರೆ. ಹಳೆಯ ಮಾದರಿ ಸೀರೆಗಳಿಗೆ ಮಾಡರ್ನ್ ಟಚ್ ಕೊಡುತ್ತಿದ್ದಾರೆ. ಮಗ್ಗದ ಮನೆಗಳಿಗೆ ತೆರಳಿ ಹೊಸ ಹೊಸ ವಿನ್ಯಾಸ ರೂಪಿಸಿ ತಯಾರಾದ ಸೀರೆಯನ್ನು ಆನ್‍ಲೈನ್ ಮೂಲಕ ಮಾರಲು ಸಂಸ್ಥೆಯೊಂದನ್ನು ಸ್ಥಾಪಿಸಿದ್ದಾರೆ.
Advertisement
ಮಹಾಲಸಾ ಕಿಣಿ ಪಬ್ಲಿಕ್ ಟಿವಿ ಜೊತೆ ಮಾತನಾಡಿ, ಮುಂಬೈ ಕಂಪನಿಯಲ್ಲಿದ್ದೆ. ಒಂದು ವರ್ಷ ನಮ್ಮ ಹೋಟೆಲ್ ನಲ್ಲಿ ಕೆಲಸ ಕೂಡ ಮಾಡಿದ್ದೆ. ನನ್ನದೇ ಸ್ವಂತ ಏನಾದರು ಮಾಡಬೇಕೆಂದು ಕಾಡುತ್ತಲೇ ಇತ್ತು. ನಮ್ಮ ಊರಿಗೂ ಅದರಿಂದ ಉಪಯೋಗ ಆಗಬೇಕು ಎಂಬ ಹಂಬಲ ಇತ್ತು. ಆನ್ ಲೈನ್ ಮೂಲಕ ಬೇರೆ ಬೇರೆ ರಾಜ್ಯಗಳ ಸೀರೆಗಳನ್ನು ಮಾರಾಟ ಮಾಡುತ್ತೇನೆ. ನನಗೆ ಸ್ಪಲ್ಪ ಲಾಭ ಇದೆ. ಸಾವಿರದಷ್ಟು ಜನ ಉಡುಪಿ ಸೀರೆ ನೇಯುತ್ತಿದ್ದರು. ಆ ಸಂಖ್ಯೆ ನೂರಕ್ಕೆ ಬಂದಿದೆ. ಬೇಡಿಕೆ ಮತ್ತು ವರಮಾನ ಹೆಚ್ಚಾದರೆ ನೇಕಾರರಿಗೆ ಶಕ್ತಿ ಬಂದಂತಾಗುತ್ತದೆ ಎಂದು ಹೇಳಿದರು.
Advertisement
ಮಹಾಲಸಾ ಕಿಣಿ ಮಲ್ಸಿ ಹೆಸರಿನ ಸಂಸ್ಥೆ ಮೂಲಕ ಆನ್ ಲೈನ್ ಸೇಲ್ ನಡೆಸುತ್ತಾರೆ. ಕೊರೊನಾ ಸಮಯದಲ್ಲಿ ಪೂರ್ಣವಾಗಿ ಉಡುಪಿ ಕೈಮಗ್ಗ ಸೀರೆಯ ನೆಯ್ಗೆ, ಉಡುಪಿ ಕೈಮಗ್ಗ ಸೀರೆಯ ಕುರಿತು ಜಾಗೃತಿ, ಅಳಿವಿನಂಚಿನಲ್ಲಿರುವ ನೇಕಾರ ಕುಟುಂಬಗಳಿಗೆ ಉತ್ತೇಜನ ಕೊಡುವಲ್ಲಿ ಶ್ರಮಪಟ್ಟಿದ್ದಾರೆ. ಉಡುಪಿ ಪ್ರಾಥಮಿಕ ನೇಕಾರರ ಸಂಘ, ಶಿವಳ್ಳಿ ಪ್ರಾಥಮಿಕ ನೇಕಾರರ ಸಂಘ, ಕಿನ್ನಿಗೋಳಿ ನೇಕಾರರ ಸಂಘದ ಸದಸ್ಯರ ಬಳಿ ಸೀರೆ ನೆಯ್ಗೆ ಮಾಡಿಸುತ್ತಿದ್ದಾರೆ. ಸೀರೆಯೊಂದಕ್ಕೆ 850 ರಿಂದ 2,000ರೂ. ಮೌಲ್ಯಕ್ಕೆ ಆನ್ ಲೈನ್ ಮೂಲಕ ಮಾರ್ಕೆಟ್ ಕ್ರಿಯೇಟ್ ಮಾಡಿದ್ದಾರೆ. ಆಫೀಸ್, ಕಾಲೇಜುಗಳಲ್ಲಿ ಉಡುಪಿ ಸೀರೆ ಸೇಲ್ ಆಗ್ತಾಯಿದೆ. ನೇಕಾರ ಸಮುದಾಯಕ್ಕೆ ಮಹಾಲಸ ಹೊಸ ಶಕ್ತಿ ತಂದುಕೊಟ್ಟಿದ್ದಾರೆ.
ನೇಕಾರ ಮಹಿಳೆ ಗೀತಾ ಮಾತನಾಡಿ, ಮಹಾಲಸಾ ಆರಂಭದಲ್ಲಿ ನೇಯುವ ಕೆಲಸ ಕಲಿತುಕೊಂಡರು. ಆಮೇಲೆ ಒಂದು ಮಗ್ಗವನ್ನು ಖರೀದಿ ಮಾಡಿದ್ದಾರೆ. ನಾವು ಹಲವಾರು ವರ್ಷ ಒಂದೇ ತರದ ಸೀರೆ ನೇಯುತ್ತಿದ್ದೆವು. ಈಗ ಹೊಸ ಹೊಸ ಡಿಸೈನ್. ಈಗಿನ ಯುವತಿಯರಿಗೆ ಇಷ್ಟವಾಗುವ ಡಿಸೈನ್ ನೇಯಲು ಶುರು ಮಾಡಿದ್ದೇವೆ. ಸಂಪಾದನೆಯೂ ಚೆನ್ನಾಗಿದೆ. ಆದ್ರೆ ಸರಕಾರ ಪ್ರೋತ್ಸಾಹಿಸಬೇಕಿದೆ. ಪೆನ್ಶನ್ ಜಾರಿಯಾಗಬೇಕು. ವಯಸ್ಸಾಯ್ತು ಇನ್ನು ನೆಯ್ಗೆ ಮಾಡಿ ಜೀವನ ಕಳೆಯೋದು ಕಷ್ಟ ಎಂದರು.
ಅಸ್ಸಾಂ, ತ್ರಿಪುರ, ಪಂಜಾಬ್- ಮಧ್ಯಪ್ರದೇಶ, ತಮಿಳ್ನಾಡು ರಾಜ್ಯಗಳ ಮಗ್ಗದ ಸೀರೆಗಳನ್ನೂ ಮಹಾಲಸ ತರಿಸಿಕೊಳ್ಳುತ್ತಿದ್ದಾರೆ. ಸಂಸ್ಕೃತಿಯ ವಿನಿಮಯ ಜೊತೆ ಅಲ್ಲಿನ ನೇಕಾರ ಸಮುದಾಯಕ್ಕೆ ಸಹಾಯ ಮಾಡುತ್ತಿದ್ದಾರೆ. ಎಂಬಿಎಯಲ್ಲಿ ಕಲಿತ ಮಾರ್ಕೆಟಿಂಗ್ ಥಿಯರಿ ಪ್ರ್ಯಾಕ್ಟಿಕಲ್ ಆಗಿ ಬಳಕೆಯಾಗುತ್ತಿದೆ.