ಉಡುಪಿ: ಕೊರೊನಾ ಎರಡನೇ ಅಲೆಯ ಸಂದರ್ಭ ಉಡುಪಿಯ ಮಲಬಾರ್ ಗೋಲ್ಡ್ ಮತ್ತು ಡೈಮಂಡ್ಸ್ ಸಂಸ್ಥೆ 18 ಲಕ್ಷ ರೂಪಾಯಿ ವೆಚ್ಚದ ಕಿಟ್ ಗಳನ್ನು ಸಾರ್ವಜನಿಕರಿಗೆ ಹಂಚಿ ಮಾನವೀಯತೆ ಮೆರೆದಿದೆ.
ಉಡುಪಿಯ ಜ್ಯುವೆಲ್ಲರಿ ಮಳಿಗೆ ಮಲಬಾರ್ ಗೋಲ್ಡ್ ಚಾರಿಟೇಬಲ್ ಟ್ರಸ್ಟ್ ನ ಸಾಮಾಜಿಕ ಸೇವೆ ಮುಂದುವರಿದಿದೆ. ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಉಪ್ಪೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 25 ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಾನುಗಳನ್ನು ವಿತರಣೆ ಮಾಡಲಾಯಿತು. ಮಲಬಾರ್ ಗೋಲ್ಡ್ ಸಿಬ್ಬಂದಿಗಳು, ಪಂಚಾಯತ್ ಅಧ್ಯಕ್ಷ ಉಪಾಧ್ಯಕ್ಷರು ಕಿಟ್ ಗಳನ್ನು ವಿತರಣೆ ಮಾಡಿದರು.
ಉಪ್ಪೂರು ಪಂಚಾಯತ್ ವ್ಯಾಪ್ತಿಯ ಆರ್ಥಿಕವಾಗಿ ಸಂಕಷ್ಟದಲ್ಲಿರುವ, ಕೂಲಿಕಾರ್ಮಿಕ ಕುಟುಂಬಗಳಿಗೆ ಫುಡ್ ಕಿಟ್ ವಿತರಿಸಲಾಯ್ತು. ಈ ಸಂದರ್ಭದಲ್ಲಿ, ಚಾರಿಟಿ ಉಸ್ತುವಾರಿ ತಂಝೀಮ್ ಶಿರ್ವ, ಇರ್ಷಾದ್, ನಿತಿನ್ ಶೇಟ್, ತಸ್ಲೀಮ್, ಫಯಾಜ್ ಉಪಸ್ಥಿತರಿದ್ದರು. ಕಳೆದ ಒಂದು ತಿಂಗಳಲ್ಲಿ ಮಲಬಾರ್ ಗೋಲ್ಡ್ 18 ಲಕ್ಷ ರುಪಾಯಿ ವೆಚ್ಚದ, 3000 ಫುಡ್ ಕಿಟ್ ವಿತರಣೆ ಮಾಡಿದೆ. ಜಿಲ್ಲೆಯ 80 ಕ್ಕೂ ಹೆಚ್ಚು ಗ್ರಾಮಗಳಿಗೆ ಟ್ರಸ್ಟ್ ದಿನಸಿಯನ್ನು ಒದಗಿಸಿದೆ.
ಮಲಬಾರ್ ಗೋಲ್ಡ್ ಉಡುಪಿ ಇದರ ಸ್ಟೋರ್ ಹೆಡ್ ಹಫೀಜ್ ರೆಹಮಾನ್ ಮಾತನಾಡಿ, ನಮ್ಮ ಸಂಸ್ಥೆ ಆರಂಭದ ದಿನಗಳಿಂದಲೂ ಸಾರ್ವಜನಿಕರ ಕಷ್ಟಗಳಿಗೆ ಸ್ಪಂದಿಸುತ್ತಾ ಬಂದಿದೆ. ಕೊರೊನಾ ಸಂದರ್ಭದಲ್ಲಿ ಬಹಳಷ್ಟು ಜನ ಇಕ್ಕಟ್ಟಿಗೆ ಸಿಲುಕಿದ್ದಾರೆ. ಆರ್ಥಿಕವಾಗಿ ಬಹಳ ಹಿಂದುಳಿದ ಜನಗಳನ್ನು ಗುರುತಿಸಿ ಅವರ ದೈನಂದಿನ ಜೀವನಕ್ಕೆ ಬಳಕೆಯಾಗುವ ವಸ್ತುಗಳನ್ನು ಕೊಡುತ್ತಿದ್ದೇವೆ. ಸಂಕಷ್ಟದ ಕಾಲದಲ್ಲಿ ಒಬ್ಬರಿಗೊಬ್ಬರು ಬೆಂಬಲವಾಗಿ ನಿಲ್ಲದಿದ್ದರೆ ದೇವರು ಮೆಚ್ಚುವುದಿಲ್ಲ. ದಿನಸಿ ಕಿಟ್ ಗಳ ಜೊತೆ ಅನಾರೋಗ್ಯ ಪೀಡಿತರಿಗೆ ಹೆಲ್ತ್ ಕಿಟ್ ಗಳನ್ನು ಕೂಡ ಕೊಟ್ಟಿದ್ದೇವೆ ಎಂದರು.