– ಚಿಕ್ಕಮಗಳೂರು, ಶಿವಮೊಗ್ಗ, ಕೊಡಗಲ್ಲಿ ಮಳೆಯಬ್ಬರ
– ಉತ್ತರ ಕರ್ನಾಟಕದಲ್ಲೂ ಆರೆಂಜ್ ಅಲರ್ಟ್
ಬೆಂಗಳೂರು: ರಣಭೀಕರ ಮಳೆ ಆಗುತ್ತಿರುವ ಕರಾವಳಿ ಕರ್ನಾಟಕ ಮತ್ತು ಮಲೆನಾಡಲ್ಲಿ ನಾಳೆವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ನಾಳೆ ಬೆಳಗ್ಗೆ 8 ಗಂಟೆವರೆಗೂ ರೆಡ್ ಅಲರ್ಟ್ ಘೋಷಿಸಲಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಲ್ಲೂ ರೆಡ್ ಅಲರ್ಟ್ ಘೋಷಣೆ ಆಗಿದೆ. ಬೆಳಗಾವಿ, ಧಾರವಾಡ, ಕೊಪ್ಪಳ, ವಿಜಯಪುರದಲ್ಲೂ ಆರೆಂಜ್ ಅಲರ್ಟ್ ಘೋಷಣೆ ಆಗಿದೆ.
ಉಡುಪಿ ಜಿಲ್ಲೆಯಲ್ಲಿ ಧಾರಾಕಾರ ಮಳೆ ಆಗ್ತಿದ್ದು, ಸ್ವರ್ಣ ನದಿ, ಸೀತಾನದಿ, ಶಾಂಭವಿ ನದಿ ಉಕ್ಕಿ ಹರಿಯುತ್ತಿದೆ. ಮನೆ, ಜಮೀನುಗಳು ಜಲಾವೃತಗೊಂಡಿವೆ. ಜಿಲ್ಲೆಯ ಹಲವು ಕಡೆಗಳಲ್ಲಿ ರಸ್ತೆ ಕುಸಿತವಾಗಿದ್ದು, ಸಂಪರ್ಕ ಕಡಿತಗೊಂಡಿದೆ. ಪ್ರವಾಹಕ್ಕೆ ಜನ-ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಇಂದ್ರಾಣಿ ನದಿಯ ಅಕ್ಕ ಪಕ್ಕದ ಪ್ರದೇಶಗಳು ಜಲಾವೃತಗೊಂಡಿವೆ. ಬೈಲಕೆರೆಯಲ್ಲಿ ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಬ್ರಹ್ಮಾವರ ತಾಲೂಕಿನ ನೀಲಾವರ, ಮಟಪಾಡಿ ಗ್ರಾಮಗಳಲ್ಲಿ ಸೀತಾನದಿಯ ಇಕ್ಕೆಲಗಳ ತೋಟಗಳಿಗೆ ನೀರು ನುಗ್ಗಿದೆ. ಉದ್ಯಾವರ ಗ್ರಾಮದ ಪಿತ್ರೋಡಿಯ ಕೆಲ ಪ್ರದೇಶ ಜಲಾವೃತವಾಗಿದೆ. ಗಜನೆ, ಪಟ್ನಾದಲ್ಲಿ ನೆರೆ ಉಂಟಾಗಿದೆ. ನಡೂರು- ಮಂದಾರ್ತಿ ಮಾರ್ಗದ ಕಿರುಸೇತುವೆ ಕೊಚ್ಚಿಕೊಂಡು ಹೋಗಿದೆ. ನಡೂರನ್ನು ಬಂಡಿಮಠಕ್ಕೆ ಸಂಪರ್ಕಿಸುವ ಸೇತುವೆ ಇದಾಗಿದೆ. ಸೇತುವೆ ಕೊಚ್ಚಿಹೋಗಿರುವ ಕಾರಣ ಸುತ್ತಬಳಸಿ ಪ್ರಯಾಣಿಸಬೇಕಾಗಿದೆ.
ಕರಾವಳಿಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಭಾರೀ ಮಳೆಯಿಂದ ಮಂಗಳೂರಿನ ಅದ್ಯಪಾಡಿ-ಕೆಂಜಾರು ರಸ್ತೆಯಲ್ಲಿ ಭೂಕುಸಿತವಾಗಿದೆ. ಮಂಗಳೂರು ಹೊರವಲಯದ ಏರ್ಪೋರ್ಟ್ ಸಮೀಪ ಇರೋ ಕೆಂಜಾರುನಲ್ಲಿ ಭೂಕುಸಿತ ಸಂಭವಿಸಿದ್ದು ಹಲವು ಗ್ರಾಮಗಳ ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಕಿನ್ನಿಗೋಳಿ ಬಳಿಯ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನಂದಿನಿ ಹಾಗೂ ಶಾಂಭವಿ ನದಿಗಳು ಉಕ್ಕಿ ಹರಿಯುತ್ತಿದೆ. ತಗ್ಗು ಪ್ರದೇಶದ ಕೃಷಿ ಭೂಮಿ ಸಂಪೂರ್ಣ ಮುಳುಗಡೆಯಾಗಿದ್ದು, ಭತ್ತದ ಬೆಳೆ ನೀರುಪಾಲಾಗಿದೆ. ಕಟೀಲು, ಮಿತ್ತಬೈಲು, ಕಿಲೆಂಜೂರು, ಪಂಜ, ಬಳ್ಕುಂಜೆ ಉಳೆಪಾಡಿ, ಏಳಿಂಜೆಯ ತಗ್ಗು ಪ್ರದೇಶದ ಕೃಷಿಭೂಮಿ ಸಂಪೂರ್ಣ ಮುಳುಗಡೆಯಾಗಿದೆ. ಅಪಾಯದಲ್ಲಿರುವ ಕುಟುಂಬಗಳನ್ನು ಸ್ಥಳೀಯರು ಹಾಗೂ ಮೂಲ್ಕಿ ಗೃಹರಕ್ಷಕ ದಳ ಸಹಾಯದಿಂದ ದೋಣಿ ಮೂಲಕ ಸ್ಥಳಾಂತರಿಸಲಾಗಿದೆ.
ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನಾದ್ಯಂತ ಭಾರೀ ಮಳೆಯಾಗುತ್ತಿದ್ದು, ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಬೈಕ್ ಸವಾರರನ್ನು ರಕ್ಷಿಸಲಾಗಿದೆ. ಉಗರಗೋಳ ಗ್ರಾಮದ ಹೊರ ವಲಯದಲ್ಲಿ ರಭಸವಾಗಿ ಹರಿಯುತ್ತಿದ್ದ ಹಳ್ಳ ದಾಟಲು ಬೈಕ್ ಸವಾರರು ಯತ್ನಿಸಿದ್ದಾರೆ. ಆದ್ರೆ ನೀರಿನ ರಭಸಕ್ಕೆ ಬೈಕ್ ಸವಾರರು ಸಿಲುಕ್ಕಿದ್ದರು. ತಕ್ಷಣ ಕೊಚ್ಚಿ ಹೋಗುತ್ತಿದ್ದ ಇಬ್ಬರನ್ನು ಸ್ಥಳೀಯರು ರಕ್ಷಿಸಿದ್ದಾರೆ.
ಮಹಾರಾಷ್ಟ್ರದ ಛತ್ ತಾಲೂಕಿನಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದ ವಿಜಯಪುರದಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದೆ. ಇನ್ನು ವಿಜಯಪುರ ಜಿಲ್ಲೆಯ ಹಲವೆಡೆ ಡೋಣಿ ನದಿಯ ಆತಂಕ ಶುರುವಾಗಿದ್ದು, ಜಮೀನುಗಳಿಗೆ ನೀರು ನುಗ್ಗುವ ಸಾಧ್ಯತೆಯಿದ್ದ ರೈತರನ್ನು ಆತಂಕಕ್ಕೀಡು ಮಾಡಿದೆ. ಇತ್ತ ವಿಜಯಪುರದಕ್ಕೂ ಭೀಮಾ ನದಿ ಭೀತಿ ಹುಟ್ಟಿಸಿದೆ. ಭೀಮಾನದಿ ಭೋರ್ಗರೆಯುತ್ತಿದ್ದು, ಪಂಡರಪುರ ಬಳಿಯ ಅಹಲ್ಯಾದೇವಿ ಸೇತುವೆ ಜಲಾವೃತವಾಗಿದೆ. ಅಲ್ಲದೇ ಪಂಡರಪುರ-ಸಾಂಗೋಲಾ ನಡುವಿನ ಕಾಸಲವಾಡಾ ಸಂಪರ್ಕ ಸೇತುವೆ ಮುಳುಗಡೆಯಾಗಿದೆ.
ಉತ್ತರ ಕರ್ನಾಟಕಕ್ಕೆ ಮತ್ತೆ ಮಹಾರಾಷ್ಟ್ರದ ಭೀತಿ ಎದುರಾಗಿದೆ. ಸೊನ್ನ ಬ್ಯಾರೇಜ್ ನಿಂದ 1.20 ಲಕ್ಷ ಕ್ಯೂಸೆಕ್ ನೀರು ಬಿಡುಗಡೆಯಾಗಿದ್ದು, ಭೀಮಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಕಲಬುರಗಿಯ ಯಲ್ಲಮ್ಮ ದೇವಿಗೆ ಜಲ ದಿಗ್ಬಂಧನ ಸೃಷ್ಟಿಯಾಗಿದೆ. ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮದಲ್ಲಿರುವ ದೇವಸ್ಥಾನ ಮುಳುಗಡೆಯಾಗಿದೆ. ಕಮಲಾಪುರ ತಾಕೂಕಿನ ಚಂದನಲ್ಲಿ ಗ್ರಾಮದಲ್ಲಿ ಘಟನೆ ನಡೆದಿದ್ದು 29 ವರ್ಷದ ಪೀರ ಶೆಟ್ಟಿ ಮೃತಪಟ್ಟಿದ್ದಾರೆ. ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿದ್ದು ತುಂಗಾಭದ್ರ ಜಲಾಶಯಕ್ಕೆ ಒಳಹರಿವು ಹೆಚ್ಚಾಗಿದೆ. ಹೀಗಾಹಿ ತುಂಗಾಭದ್ರಾ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ಗೂ ಅಧಿಕ ನೀರು ಬಿಡುಗಡೆ ಮಾಡಲಾಗಿದೆ. 20 ಗೇಟ್ ಗಳ ಮೂಲಕ ನದಿಗೆ ನೀರು ಬಿಡಲಾಗಿದೆ. ಮುಂಜಾಗ್ರತೆಯ ಕ್ರಮವಾಗಿ ನದಿ ಪಾತ್ರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ಕೊಪ್ಪಳ ಜಿಲ್ಲಾಡಳಿತ ಮನವಿ ಮಾಡಿದೆ.
ಕೊಡಗು ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರೆದಿದ್ದು, ಬಾಗಮಂಡಲ ಮಡಿಕೇರಿ ರಸ್ತೆಯು ಜಲಾವೃತಗೊಂಡಿದೆ. ತ್ರಿವೇಣಿ ಸಂಗಮ ಸಂಪೂರ್ಣ ಮುಳುಗಡೆ ಆಗುವ ಸಾಧ್ಯತೆ ಇದೆ. ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಆವರಿಸಿದೆ. ರಾಯಚೂರು ಜಿಲ್ಲೆಯಲ್ಲೂ ಧಾರಾಕಾರ ಮಳೆ ಆಗಿದೆ. ಇಡಪನೂರು, ಮಿಡಗಲದಿನ್ನಿ, ಗಾಣದಾಳ, ಗುಂಜಳ್ಳಿ, ಜಾಲಿಬೆಂಚಿ ಗ್ರಾಮದಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿ ಆಗಿದೆ. ಬೀಜ, ಗೊಬ್ಬರ, ಕೂಲಿಯಾಳು ಅಂತ ಸಾವಿರಾರು ರೂಪಾಯಿ ಖರ್ಚು ಮಾಡಿ ಬೆಳೆ ಬೆಳೆದಿದ್ದ ರೈತರು ಈಗ ಕಂಗಾಲಾಗಿದ್ದಾರೆ. ಜಿಲ್ಲೆಯಾದ್ಯಂತ ಮೋಡಕವಿದ ವಾತಾವರಣ ಮುಂದುವರೆದಿದ್ದು ಇನ್ನೂ ಮಳೆ ಮುಂದುವರಿಯುವ ಸಾಧ್ಯತೆಗಳಿವೆ.
ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಯಲ್ಲಿ ಆಗುತ್ತಿರುವ ಧಾರಾಕಾರ ಮಳೆಯಿಂದ ಶಿವಮೊಗ್ಗದಲ್ಲಿ ಭದ್ರಾನದಿ ಉಕ್ಕಿ ಹರಿಯುತ್ತಿದೆ. ಭದ್ರಾವತಿ ನಗರದಲ್ಲಿನ ಸೇತುವೆ ಮುಳುಗಡೆಯಾಗಿದೆ. ಭದ್ರಾ ಜಲಾಶಯದಿಂದ 61 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. ನದಿಪಾತ್ರದ ಜನತೆ ಸುರಕ್ಷಿತವಾಗಿ ಹಾಗೂ ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ.
ಶಿವಮೊಗ್ಗದ ಗಾಜನೂರಿನ ತುಂಗಾ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಹೆಚ್ಚಳವಾಗ್ತಿದೆ. ಜಲಾಶಯಕ್ಕೆ 33 ಸಾವಿರ ಕ್ಯೂಸೆಕ್ ಒಳ ಹರಿವು ಬರುತ್ತಿದ್ದು, ಜಲಾಶಯದಿಂದಲೂ 33 ಸಾವಿರ ಕ್ಯೂಸೆಕ್ ನೀರನ್ನು ಹೊರ ಬಿಡಲಾಗುತ್ತಿದೆ. ಒಳ ಹರಿವು ಹೆಚ್ಚಾದಂತೆ ಹೊರ ಹರಿವಿನ ಪ್ರಮಾಣ ಹೆಚ್ಚಳವಾಗಲಿದ್ದು, ನದಿಪಾತ್ರದ ಜನತೆ ಸುರಕ್ಷಿತವಾಗಿ ಹಾಗೂ ಎಚ್ಚರಿಕೆಯಿಂದ ಇರುವಂತೆ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ. ಯಾದಗಿರಿ ಜಿಲ್ಲೆಯಲ್ಲೂ ಧಾರಕಾರ ಮಳೆ ಆಗ್ತಿದೆ. ಸುರಪುರ ತಾಲೂಕಿನ ಕೆಂಭಾವಿಯಲ್ಲಿ ಮಳೆಗೆ ಬಜಾರ್ ಏರಿಯಾ ಹನುಮಾನ್ ಮಂದಿರ ಜಲಾವೃತಗೊಂಡಿದೆ. ಮಾರ್ಕೆಟ್ ಏರಿಯಾದಲ್ಲಿನ 20 ಅಂಗಡಿಗಳು ಜಲಾವೃತವಾಗಿವೆ.