ಉಡುಪಿ: ಶವ ರವಾನೆ ಸಂದರ್ಭ ಎಡವಟ್ಟಾಗಿ ಮೃತದೇಹಗಳು ಬದಲಾದ ಘಟನೆ ಉಡುಪಿಯಲ್ಲಿ ನಡೆದಿದೆ. ಕೊರೊನಾ ಕಾಲದ ಶವ ಪ್ಯಾಕಿಂಗ್ ನಿಂದ ಈ ಸಮಸ್ಯೆ ಎದುರಾಗಿದೆ.
ಕುಂದಾಪುರ ತಾಲೂಕಿನ ಕೋಟೇಶ್ವರದ ಗಂಗಾಧರ್ ಆಚಾರ್ಯ ನಿಮೋನಿಯಾ ಮತ್ತು ಕೊರೊನಾದಿಂದ ಉಡುಪಿ ಟಿಎಂಎಪಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಅಲ್ಲಿ ಜಾಗ ಇಲ್ಲ ಎಂದು ಗಂಗಾಧರ್ ಮೃತದೇಹವನ್ನು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿತ್ತು. ಕಾರ್ಕಳ ತಾಲೂಕಿನ ಪ್ರಕಾಶ್ ಆಚಾರ್ಯ ಜಾಂಡಿಸ್ ನಿಂದ ಬಳಲಿ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದರು.
ಎರಡು ಮೃತದೇಹವನ್ನು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿತ್ತು. ಇಂದು ಬೆಳಗ್ಗೆ ಉಡುಪಿ ಜಿಲ್ಲಾ ಆಸ್ಪತ್ರೆಯ ಸಿಬ್ಬಂದಿ ಕುಂದಾಪುರಕ್ಕೆ ಗಂಗಾಧರ್ ಆಚಾರ್ಯ ಅವರ ಮೃತದೇಹವನ್ನು ಸಾಗಿಸುವ ಬದಲು ಪ್ರಕಾಶ್ ಆಚಾರ್ಯ ಮೃತದೇಹ ಸಾಗಿಸಿದ್ದಾರೆ. ಕುಂದಾಪುರದ ಸಂಗಮ್ ಸರ್ಕಲ್ ರುದ್ರಭೂಮಿಯಲ್ಲಿ ಹೈಡ್ರಾಮಾ ಕ್ರಿಯೇಟ್ ಆಗಿದೆ. ಇದು ಗಂಗಾಧರ್ ಆಚಾರ್ಯ ಅವರ ಮೃತದೇಹ ಅಲ್ಲ ಎಂದು ಕುಟುಂಬಸ್ಥರು ತಗಾದೆ ಎತ್ತಿದ್ದಾರೆ. ಹತ್ತಾರು ಜನ ರುದ್ರಭೂಮಿಯಲ್ಲಿ ಜಮಾಯಿಸಿದ್ದಾರೆ. ಸಿಬ್ಬಂದಿ ಎಡವಟ್ಟಿನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರ ಮಧ್ಯಪ್ರವೇಶ ನಂತರ ಶವ ಉಡುಪಿಗೆ ಕಳುಹಿಸಲಾಯ್ತು.
ಇಷ್ಟಾಗುವಾಗ ಕಾರ್ಕಳದ ಪ್ರಕಾಶ್ ಆಚಾರ್ಯ ಕುಟುಂಬ ಉಡುಪಿ ಜಿಲ್ಲಾ ಆಸ್ಪತ್ರೆಗೆ ಬಂದಿದೆ. ಜಿಲ್ಲಾ ಆಸ್ಪತ್ರೆಯಿಂದ ನಮ್ಮ ಮೃತದೇಹ ಕಾಣೆಯಾಗಿದೆ ಎಂದು ವೈದ್ಯರ ಮುಂದೆ ಅಸಹಾಯಕತೆ ತೋಡಿಕೊಂಡಿದ್ದಾರೆ. ಪ್ರಕಾಶ್ ಸೋದರ ರವಿ ಮಾತನಾಡಿ, ಇಂತಹ ಗೊಂದಲ ಮತ್ತೆ ಆಗದಿರಲಿ ಎಂದು ಹೇಳಿದರು.
ಬದಲಾದ ಮೃತದೇಹಗಳನ್ನು ಆಯಾಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ. ಕುಂದಾಪುರದ ಗಂಗಾಧರ್ ಆಚಾರ್ಯ ಕುಟುಂಬ ಶವ ರವಾನೆ ಸಂದರ್ಭ ಜಿಲ್ಲಾಸ್ಪತ್ರೆಗೆ ಬಂದಿಲ್ಲ. ಕುಟುಂಬಿಕರು ಬಾರದಿರುವುದು ತಪ್ಪು ಎಂದು ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಸರ್ಜನ್ ಮಧುಸೂದನ ಸ್ಪಷ್ಟನೆ ಕೊಟ್ಟಿದ್ದಾರೆ. ಪರಿಶೀಲಿಸದೆ ಮೃತದೇಹ ರವಾನಿಸಿದವರಿಗೆ ಕಾರಣ ಕೇಳಿ ನೋಟಿಸ್ ಕೊಡುವುದಾಗಿ ಹೇಳಿದ್ದಾರೆ.
ಮೃತದೇಹ ಸಾಗಾಟ ಮಾಡಿದ ಸಿಬ್ಬಂದಿ ಶರೀರದಲ್ಲಿರುವ ಕ್ರಮ ಸಂಖ್ಯೆ ಹೆಸರನ್ನು ನೋಡದೆ ರವಾನೆ ಮಾಡಿದ್ದು ತಪ್ಪು ಎಂದು ಕುಂದಾಪುರದ ಕುಟುಂಬ ಅಸಮಾಧಾನ ವ್ಯಕ್ತಪಡಿಸಿದೆ. ಮೊದಲೇ ನೋವಿನಲ್ಲಿರುವ ನಮಗೆ ಈ ಘಟನೆ ಮತ್ತಷ್ಟು ಹಿಂಸೆಗೆ ಕಾರಣವಾಗಿದೆ ಎಂರು ಕಾರ್ಕಳ ದ ಕುಟುಂಬ ಹೇಳಿದೆ. ಮಣಿಪಾಲ ಕೆಎಂಸಿ ಆಸ್ಪತ್ರೆಯ ಶವ ಇರಿಸುವ ಸ್ಟೋರೇಜ್ ತುಂಬಿದ್ದರಿಂದ ಈ ಎಡವಟ್ಟು ಆಗಿದೆ ಎನ್ನಲಾಗಿದೆ. ಸುಮಾರು ನಾಲ್ಕು ಗಂಟೆಗಳ ಗೊಂದಲ ನಂತರ ಶವಗಳನ್ನು ಆಯಾಯ ಕುಟುಂಬಕ್ಕೆ ಹಸ್ತಾಂತರ ಮಾಡಿ ಗೊಂದಲ ನಿವಾರಿಸಲಾಯ್ತು.