ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರದ 2000 ಎಕ್ರೆ ಹಡಿಲು ಭೂಮಿಯನ್ನು, ಈ ಮಳೆಗಾಲದ ಆರಂಭದಲ್ಲಿ ಬಿತ್ತನೆ ಮಾಡಿ ಬೆಳೆ ತೆಗೆಯುವ ಯೋಜನೆ ಆರಂಭವಾಗಿದೆ. ಉಡುಪಿಯ ಎಲ್ಲಾ ನಗರಸಭೆ ಅವಾರ್ಡ್ ಮತ್ತು ಪಂಚಾಯತ್ ಗಳಲ್ಲಿ ಭೂಮಿಯನ್ನು ಗುರುತು ಮಾಡಲಾಗಿದೆ.
ಉಡುಪಿಯಲ್ಲಿ ಹಮ್ಮಿಕೊಂಡಿರುವ ಹಡಿಲು ಭೂಮಿ ಕೃಷಿ ಅಂದೋಲನದಡಿ ಕೇದರೋತ್ತಾನ ಯೋಜನೆಗೆ ಸಿದ್ಧತೆ ನಡೆಯುತ್ತಿದೆ. ಮೂಡುಸಗ್ರಿ ವಾರ್ಡಿನ ಹಡಿಲು ಭೂಮಿ ಕೃಷಿ ಚಟುವಟಿಕೆಗಳನ್ನು ಶಾಸಕ ಕೆ. ರಘುಪತಿ ಭಟ್ ವೀಕ್ಷಣೆ ಮಾಡಿದರು. ಈಗ ಕೃಷಿಭೂಮಿ ಸುತ್ತಮುತ್ತಲಿನ ತೋಡುಗಳನ್ನು ಅಭಿವೃದ್ಧಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ
ಮೂಡುಸಗ್ರಿಯ 1.50 ಎಕರೆ ಹಡಿಲು ಭೂಮಿಯನ್ನು ಸಾವಯುವ ಕೃಷಿ ಮಾಡಲಾಗುತ್ತಿದೆ. ಊರಿನ ಹಿರಿಯರು, ಭೂ ಮಾಲಕರು ಉತ್ಸಾಹದಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಯುವಕರು ಕೊರೊನಾ ಕಾಲದಲ್ಲಿ ಬೇಸಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಪರ್ಕಳ ವಾರ್ಡಿನಲ್ಲಿ ಕೇದಾರೋತ್ಥಾನ ಟ್ರಸ್ಟ್ ಮೂಲಕ ಸುಮಾರು 200 ಎಕರೆ ಹಡಿಲು ಭೂಮಿ ಕೃಷಿ ಮಾಡಲಾಗುತ್ತಿದೆ. ಇಲ್ಲಿನ ಸ್ಥಳೀಯರು ಹಡಿಲು ಗದ್ದೆಯಲ್ಲಿ ತುಂಬಿಕೊಂಡಿರುವ ಪ್ಲಾಸ್ಟಿಕ್ ಬಾಟಲಿ ಗಳನ್ನು ತೆಗೆದು ಉಳುಮೆ ಕೆಲಸಕ್ಕೆ ಗದ್ದೆಯನ್ನು ಹದ ಮಾಡಿದರು. ರೈತರು ಸತ್ಯಾನ ವಹಿಸುತ್ತಿರುವ ಸವಾಲು ಕೃಷಿ ಇಲಾಖೆಯಿಂದ ಬೇಕಾಗಿರುವ ಸಾಮಾಗ್ರಿಗಳು ಬಿತ್ತನೆಬೀಜ ದ ಬಗ್ಗೆ ಮಾಹಿತಿಗಳನ್ನು ಶಾಸಕ ರಘುಪತಿ ಭಟ್ ಸಂಗ್ರಹಿಸಿದರು.
ಶಾಸಕ ರಘುಪತಿ ಭಟ್ ಮಾತನಾಡಿ, ಸಾಂಕ್ರಾಮಿಕ ಕೊರೊನಾ ಇರುವುದರಿಂದ ಲಾಕ್‍ಡೌನ್ ಆಗಿದೆ. ಕೃಷಿ ಚಟುವಟಿಕೆಗೆ ಅವಕಾಶ ಇದೆ. ಹಡಿಲು ಬಿದ್ದಿರುವ ಫಲವತ್ತಾದ ಭೂಮಿಯಲ್ಲಿ ಮತ್ತೆ ಬೆಳೆಸುವುದು ನಮ್ಮ ಆಲೋಚನೆ. ಪ್ರತಿವರ್ಷ ಒಂದೆರಡು ಸಾವಿರ ಎಕರೆ ಹಡಿಲು ಭೂಮಿಯನ್ನು ಗುರುತಿಸಿ ಅಲ್ಲಿ ಹಸಿರು ಬಳಸುತ್ತೇವೆ. ನಮ್ಮ ಅನ್ನವನ್ನು ನಾವು ಬೆಳೆದರೆ ಅದಕ್ಕಿಂತ ದೊಡ್ಡ ಸ್ವಾವಲಂಬಿ ಬದುಕು, ಆತ್ಮನಿರ್ಭರತೆ ಮತ್ತೊಂದು ಕೆಲಸ ಇಲ್ಲ ಎಂದರು.
ಈ ಸಂದರ್ಭದಲ್ಲಿ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ರಾಘವೇಂದ್ರ ಕಿಣಿ, ಉಡುಪಿ ನಗರಸಭೆಯ ಅಧ್ಯಕ್ಷರಾದ ಸುಮಿತ್ರಾ ಆರ್ ನಾಯಕ್, ನಗರ ಬಿಜೆಪಿ ಅಧ್ಯಕ್ಷರಾದ ಮಹೇಶ್ ಠಾಕೂರ್, ನಗರ ಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ್, ಅಲ್ಪಸಂಖ್ಯಾತ ಮೋರ್ಚಾ ಪ್ರಧಾನ ಕಾರ್ಯದರ್ಶಿ ಅಲ್ವಿನ್ ಡಿಸೋಜ, ಸ್ಥಳೀಯರಾದ ರಂಜಿತ್ ಶೆಟ್ಟಿ ಮತ್ತು ಕೃಷಿ ಇಲಾಖೆಯ ಜಂಟಿ ನಿರ್ದೇಶಕರಾದ ಕೆಂಪೇಗೌಡ, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ಕ್ಷೇತ್ರ ಅಧಿಕಾರಿಗಳಾದ ಶಂಕರ್ ಹಾಗೂ ಸ್ಥಳೀಯ ಕೃಷಿಕರು ಉಪಸ್ಥಿತರಿದ್ದರು.