ಉಡುಪಿ: ವಿದೇಶದಲ್ಲೂ ಸಂಚಲನ ಮೂಡಿಸಿದ್ದ ಉಡುಪಿಯ ವಿಶಾಲ ಗಾಣಿಗ ಕೊಲೆ ಪ್ರಕರಣದ ಮತ್ತೋರ್ವ ಸುಪಾರಿ ಹಂತಕನ ಸುಳಿವು ಉಡುಪಿ ಪೊಲೀಸರಿಗೆ ದೊರೆತಿದೆ. ಆತನ ಬಂಧನಕ್ಕೆ ಪೊಲೀಸರು ಉತ್ತರ ಪ್ರದೇಶಕ್ಕೆ ತೆರಳಿದ್ದಾರೆ.
ಸುಪಾರಿ ಕಿಲ್ಲರ್ ಗಳ ಮೂಲಕ ವಿಶಾಲ ಗಾಣಿಗ (35) ಹತ್ಯೆ ಮಾಡಿಸಿದ್ದ ಪತಿ ರಾಮಕೃಷ್ಣ ಗಾಣಿಗ ನನ್ನು ಬಂಧಿಸಿದ್ದ ಪೊಲೀಸ್ ತಂಡ, ಬಳಿಕ ಉತ್ತರ ಪ್ರದೇಶದ ಗೋರಖ್‍ಪುರದಲ್ಲಿ ಒಬ್ಬ ಸುಪಾರಿ ಹಂತಕನನ್ನು ಜುಲೈ 19ರಂದು ಬಂಧಿಸಿತ್ತು. ಇಬ್ಬರೂ ಪೊಲೀಸ್ ಕಸ್ಟಡಿಯಲ್ಲಿ ಇದ್ದಾರೆ.
ಇದೀಗ ಉತ್ತರ ಪ್ರದೇಶದ ಪೊಲೀಸರ ಸಹಕಾರದೊಂದಿಗೆ ಎರಡನೇ ಸುಪಾರಿ ಹಂತಕನ ಬಂಧನಕ್ಕೆ ಬಲೆ ಬೀಸಿದ್ದು, ಇನ್ನೆರಡು ದಿನದಲ್ಲಿ ಬಂಧಿಸಿ ಜಿಲ್ಲೆಗೆ ಕರೆತರುವ ಸಾಧ್ಯತೆ ಇದೆ. ಕೊಲೆಯಾದ ನಂತರ ಇಬ್ಬರು ಆರೋಪಿಗಳು ಉಡುಪಿಯಿಂದ ಮಹಾರಾಷ್ಟ್ರಕ್ಕೆ ತೆರಳಿ ತಲೆಮರಿಸಿಕೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಇತ್ತು. ಪತಿ ರಾಮಕೃಷ್ಣ ಬಂಧನ ವಾಗುತ್ತಿದ್ದಂತೆ ಅಲ್ಲಿಂದ ಉತ್ತರಪ್ರದೇಶಕ್ಕೆ ತೆರಳಿದ್ದರು.
ಉಡುಪಿಯಲ್ಲಿ ಪೊಲೀಸರು ಪತ್ರಿಕಾಗೋಷ್ಠಿ ನಡೆಸಿ ಕೊಲೆ ಪ್ರಕರಣದ ಬಗ್ಗೆ ಮಾಹಿತಿ ನೀಡಿದ್ದರು. ಉತ್ತರಪ್ರದೇಶದ ಪತ್ರಿಕೆ ಮತ್ತು ವೆವ್‍ಸೈಟ್ ಗಳಲ್ಲಿ ಸುದ್ದಿ ಪ್ರಕಟವಾಗಿತ್ತು. ಇನ್ನೋರ್ವ ಆರೋಪಿ ಪೊಲೀಸರ ಜಾಲದಿಂದ ತಪ್ಪಿಸಿಕೊಂಡಿದ್ದ ಎಂದು ಪೊಲೀಸ್ ಮೂಲಗಳ ಮಾಹಿತಿಯಿಂದ ತಿಳಿದು ಬಂದಿದೆ.
ಈ ನಡುವೆ ಪೊಲೀಸ್ ಕಸ್ಟಡಿಯಲ್ಲಿರುವ ಪತಿ ರಾಮಕೃಷ್ಣ ಗಾಣಿಗ ಮತ್ತು ಕೊಲೆಗಾರ ಸ್ವಾಮಿನಾಥ- ನಿಶಾದನನ್ನು ತೀವ್ರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಕರಣ ಸಂಬಂಧ ಮಹತ್ವದ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿದೆ. ಆಸ್ತಿ ಮತ್ತು ಇತರೆ ಕೌಟುಂಬಿಕ ವಿಚಾರಗಳನ್ನು ರಾಮಕೃಷ್ಣ ಬಾಯಿಬಿಟ್ಟಿದ್ದಾನೆ. ದುಬೈಯಿಂದ ಸುಪಾರಿ ಪಡೆದ ಪ್ರಮುಖ ಡೀಲ್ ಮಾಸ್ಟರ್ ಇನ್ನಷ್ಟೇ ಬಂಧನ ಆಗಬೇಕಾಗಿದೆ. ಇದನ್ನೂ ಓದಿ: ವಿಶಾಲ ಗಾಣಿಗಳಿಗೆ ದುಬೈನಿಂದ ಪತಿ ಸ್ಕೆಚ್ – ನೇಪಾಳ ಗಡಿಯಲ್ಲಿ ಸುಪಾರಿ ಕಿಲ್ಲರ್ ಅರೆಸ್ಟ್