– ಸಮುದಾಯಕ್ಕೆ ಹಬ್ಬದಂತೆ ಹಲವು ಮುನ್ನೆಚ್ಚರಿಕೆ ಡಿಸಿ ಮಾಹಿತಿ
ಉಡುಪಿ: ಜಿಲ್ಲೆಯಲ್ಲಿ ಇಂದು 22 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಒಟ್ಟು ಸೋಂಕಿತರ ಸಂಖ್ಯೆ 1,228ಕ್ಕೆ ಏರಿಕೆಯಾಗಿದೆ.
ಜಿಲ್ಲೆಯ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿರುವ ಡಿಎಚ್‍ಒ ಡಾ. ಸುಧೀರ್ ಚಂದ್ರ ಸೂಡಾ, ಮಹಾರಾಷ್ಟ್ರದಿಂದ ಬಂದ 5, ತೆಲಂಗಾಣದ ಓರ್ವರು, ಬೆಂಗಳೂರಿನಿಂದ ಬಂದ ವ್ಯಕ್ತಿಯಲ್ಲಿ ಸೋಂಕು ಧೃಡಪಟ್ಟಿದೆ ಎಂದು ಮಾಹಿತಿ ನೀಡಿದರು. ಅಬುದಾಬಿಯಿಂದ ಬಂದ ಒಂದು ವರ್ಷದ ಮಗು, ಪ್ರಾಥಮಿಕ ಸಂಪರ್ಕದಿಂದ ಜಿಲ್ಲೆಯ 14 ಜನರಲ್ಲಿ ಕೋವಿಡ್-19 ಇರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ.
ಸಮುದಾಯಕ್ಕೆ ಹಬ್ಬಿಲ್ಲ: ಉಡುಪಿಯಲ್ಲಿ ಕೊರೊನಾ ಸಮುದಾಯಕ್ಕೆ ಹಬ್ಬಿಲ್ಲ. ಸಮುದಾಯ ಸರ್ವೇ ಹೆಚ್ಚು ಮಾಡುತ್ತಿದ್ದೇವೆ. ಕಮ್ಯೂನಿಟಿ ಸ್ಪ್ರೆಡ್ ತಪ್ಪಿಸುವುದು ಜಿಲ್ಲಾಡಳಿತದ ಉದ್ದೇಶ. ಸಾರ್ವಜನಿಕರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಉಡುಪಿ ಡಿಸಿ ಜಿ. ಜಗದೀಶ್ ಮಾಹಿತಿ ನೀಡಿದರು.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಉಡುಪಿಗೆ ಮಹಾರಾಷ್ಟ್ರದಿಂದ 250- 300 ಜನ ಪ್ರತಿದಿನ ಬರುತಿದ್ದಾರೆ. ಈ ಒಂದು ವಾರದಲ್ಲಿ ಪ್ರಾಥಮಿಕ ಸಂಪರ್ಕಿತರಲ್ಲಿ ಕೊರೊನಾ ಕಾಣಿಸಿಕೊಳ್ಳುತ್ತಿದೆ. ಜಿಲ್ಲೆಯಲ್ಲಿ ಟ್ರಾವೆಲ್ ಹಿಸ್ಟರಿ ಇಲ್ಲದ ಪ್ರಕರಣ ಈವರೆಗೆ ಇಲ್ಲ. ಇಬ್ಬರು ಬಸ್ ಚಾಲಕರಿಗೆ ಕೊರೊನಾ ಆವರಿಸಿದೆ. ಬೈಂದೂರಿನ ಜವಳಿ ವ್ಯಾಪಾರಿಗೆ ಕೋವಿಡ್-19 ಧೃಡಪಟ್ಟಿದೆ ಎಂದು ಮಾಹಿತಿ ನೀಡಿದರು. ಮಾಲ್, ಡೆಲಿವರಿ ಬಾಯ್ಸ್ ಗಳನ್ನು ತಪಾಸಣೆ ಮಾಡುತ್ತಿದ್ದೇವೆ ಎಂದರು.
ಜಿಲ್ಲೆಯ 600 ಸರ್ಕಾರಿ ಬಸ್ ಚಾಲಕರ ತಪಾಸಣೆ ಮಾಡಲಾಗಿದೆ. ಜನಸಂದಣಿ ಕ್ಯಾಟಗರಿ ಮಾಡಿ ಕೊರೊನಾ ಟೆಸ್ಟಿಂಗ್ ಮಾಡುತ್ತೇವೆ. ಉಡುಪಿಯಲ್ಲಿ ನಾಲ್ಕು ಜನ ರೋಗಿಗಳು ಐಸಿಯುನಲ್ಲಿದ್ದಾರೆ. ಈ ಪೈಕಿ ಮೂರು ರೋಗಿಗಳು ಚೇತರಿಸಿಕೊಂಡಿದ್ದು, ಓರ್ವ ರೋಗಿ ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ಅವರು ಕೊಂಚ ಚೇತರಿಸುತ್ತಿದ್ದಾರೆ. ಪ್ರತಿ ಜೀವ ಉಳಿಸೋದು ನಮ್ಮ ಉದ್ದೇಶ. ಉಡುಪಿಯಲ್ಲಿ ಕೊರೊನಾದಿಂದ ಒಂದು ಸಾವೂ ಆಗಿಲ್ಲ. ಆಸ್ಪತ್ರೆ ಸೇರಿದ ಮೇಲೆ ಕೊರೊನಾದಿಂದ ರೋಗಿ ಈವರೆಗೆ ಸಾವನ್ನಪ್ಪಿಲ್ಲ ಎಂದು ತಿಳಿಸಿದರು.