ಉಡುಪಿ: ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. 24 ತಾಸುಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ಸರಾಸರಿ 81 ಮಿ.ಮೀ. ಮಳೆಯಾಗಿದೆ. ಉಡುಪಿ ತಾಲೂಕಿನಲ್ಲಿ 83 ಮಿ.ಮೀ., ಕುಂದಾಪುರದಲ್ಲಿ 85.5 ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 73 ಮಿ.ಮೀ. ಮಳೆ ಸುರಿದಿದೆ.
ಇದೇ ಅವಧಿಯಲ್ಲಿ ಬಳ್ಕೂರು ಗ್ರಾಮದಲ್ಲಿ ಅತೀ ಹೆಚ್ಚು 145 ಮಿ.ಮೀ. ಮಳೆಯಾಗಿದೆ. ಶಂಕರನಾರಾಯಣ, ಇನ್ನಾಘಿ, ನೀರೆ, ಕಾಲ್ತೋಡು ಮತ್ತಿತರ ಗ್ರಾಮಗಳಲ್ಲಿ 100 ಮಿ.ಮೀ ಗಳಿಗಿಂತಲೂ ಅಧಿಕ ಮಳೆ ಬಿದ್ದಿದೆ. ಜಿಲ್ಲೆಯಾದ್ಯಂತ ಭಾರೀ ಮಳೆಯಾಗಿದೆ. ಒಂದೇ ರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯಲ್ಲಿ ಕೆಲವು ಮನೆಗಳಿಗೆ ಹಾನಿಸಂಭವಿಸಿದೆ. ಬೈಂದೂರು ತಾಲೂಕಿನ ಬಿಜೂರು ಗ್ರಾಮದ ಚಣ್ಣಮ್ಮ ಅವರ ಮನೆಯ ಗೋಡೆ ಕುಸಿದು ಭಾಗಶಃ ಹಾನಿಯಾಗಿದೆ.
Advertisement
Advertisement
ಸುಮಾರು 35 ಸಾವಿರ ರೂ. ನಷ್ಟ ಉಂಟಾಗಿದೆ. ಹೆಬ್ರಿ ತಾಲೂಕಿನ ಶಿವಪುರ ಗ್ರಾಮದ ದಿನೇಶ್ ಅವರ ಮನೆ ಗಾಳಿ ಮಳೆಯಿಂದ ಹಾನಿಯಾಗಿ 50ಸಾವಿರ ರೂ., ಕಾರ್ಕಳ ತಾಲೂಕಿನ ಎಳ್ಳಾರೆ ಗ್ರಾಮದ ಶಾಂತಾ ಅವರ ಮನೆ ಮೇಲೆ ಮರಬಿದ್ದು 50ಸಾವಿರ ರೂ. ನಷ್ಟವಾಗಿದೆ. ಅದೇ ಗ್ರಾಮದ ಕೃಷ್ಣ ನಾಯಕ್ ಅವರ ಬಾಳೆ ತೋಟಕ್ಕೆ ಗಾಳಿ ಮಳೆಯಿಂದ ಹಾನಿಯಾಗಿ ಬೆಳೆ ನಷ್ಟವಾಗಿದೆ. ಇದರಿಂದಾಗಿ 35ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ.