-ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದ ಪ್ರೈವೇಟ್ ಬಸ್‍ಗಳು
ಉಡುಪಿ: ರಾಜ್ಯಾದ್ಯಂತ ಸರ್ಕಾರಿ ಬಸ್ ನೌಕರರ ಮುಷ್ಕರ ಮುಂದುವರಿದಿದೆ. ಪರಿಸ್ಥಿತಿಯ ಲಾಭವನ್ನು ಪಡೆಯಲು ಖಾಸಗಿ ವಲಯ ಹೊಂಚು ಹಾಕುತ್ತಿದ್ದು, ಹೆಚ್ಚುವರಿ ಬಸ್ಸುಗಳನ್ನು ರಸ್ತೆಗೆ ಇಳಿಸಿವೆ.
ಉಡುಪಿಯಲ್ಲಿ ಕಳೆದ ನಾಲ್ಕು ದಿನಗಳಿಂದ ಖಾಸಗಿ ಬಸ್ ದರ್ಬಾರ್ ನಡೆಯುತ್ತಿದೆ. ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣಕ್ಕೆ ಪ್ರೈವೇಟ್ ಬಸ್‍ಗಳು ಸಾಲು ಸಾಲಾಗಿ ಲಗ್ಗೆಯಿಟ್ಟಿವೆ. ಉಡುಪಿ ಸಿಟಿ ಮತ್ತು ಸರ್ವಿಸ್ ಬಸ್ ಗಳ ಸಂಖ್ಯೆಯನ್ನು ಖಾಸಗಿಯವರು ಏರಿಸಿದ್ದು, ಟೂರಿಸ್ಟ್ ಬಸ್‍ಗಳನ್ನು ನಿಯೋಜಿಸಿದ್ದಾರೆ.
ಉಡುಪಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಖಾಸಗಿ ಬಸ್‍ಗಳನ್ನು ನಿಯೋಜಿಸಲಾಗಿದೆ. ಟೂರಿಸ್ಟ್ ಬಸ್‍ಗಳನ್ನು ಪಾರ್ಕ್ ಮಾಡಲಾಗಿದ್ದು ಹೊರ ಜಿಲ್ಲೆಗಳಿಗೆ ಹೋಗುವ ಬಸ್ಸುಗಳು ಸರ್ಕಾರಿ ಬಸ್ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗುತ್ತಿವೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು 2000 ಖಾಸಗಿ ಬಸ್ಸುಗಳು ಇದ್ದು ಮುಷ್ಕರ ಸಂದರ್ಭ ಹೆಚ್ಚುವರಿ ಬಸ್ಸುಗಳನ್ನು ಎಲ್ಲಾ ರೂಟ್‍ಗಳಲ್ಲಿ ಓಡಿಸುತ್ತೇವೆ ಎಂದು ರಾಜ್ಯ ಖಾಸಗಿ ಬಸ್ ಮಾಲಕರ ಒಕ್ಕೂಟದ ಕೋಶಾಧಿಕಾರಿ ಕುಯಿಲಾಡಿ ಸುರೇಶ್ ನಾಯಕ್ ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇಂದು ಸರ್ವಿಸ್ ಮತ್ತು ಸಿಟಿ ಬಸ್ ನಿಲ್ದಾಣಗಳಲ್ಲಿ ಹೆಚ್ಚುವರಿ ಖಾಸಗಿ ಬಸ್ಸುಗಳು ಕಾಣಿಸಿಕೊಂಡಿವೆ.