– ಮೃತ ವ್ಯಕ್ತಿಗೆ ಲಕ್ಷಣ ಇಲ್ಲದಿದ್ರೂ ಸೋಂಕು
ಉಡುಪಿ: ಮಹಾಮಾರಿ ಕೊರೊನಾ ಉಡುಪಿ ಜಿಲ್ಲೆಯಲ್ಲಿ ಎರಡನೇ ಬಲಿ ಪಡೆದಿದೆ. ಮಹಾರಾಷ್ಟ್ರದಿಂದ ಬಂದ ವ್ಯಕ್ತಿ ಮೂರೇ ಗಂಟೆಯಲ್ಲಿ ಕುಸಿದು ಬಿದ್ದು ಮೃತಪಟ್ಟಿದ್ದಾರೆ.
ಗುರುವಾರ ಮಧ್ಯಾಹ್ನ ಉಡುಪಿ ಜಿಲ್ಲೆಯ ನೋಂದಣಿ ಕೇಂದ್ರಕ್ಕೆ ಬಂದಿದ್ದ ವ್ಯಕ್ತಿಯನ್ನು ಅಧಿಕಾರಿಗಳು ತಪಾಸಣೆ ಮಾಡಿದ್ದರು. 54 ವರ್ಷದ ಆ ವ್ಯಕ್ತಿಯಲ್ಲಿ ಕೊರೊನಾದ ಯಾವುದೇ ಗುಣಲಕ್ಷಣಗಳು ಕಂಡು ಬಂದಿಲ್ಲ. ಹಾಗಾಗಿ ಅವರನ್ನು ನೇರವಾಗಿ ಹೋಂ ಕ್ವಾರಂಟೈನ್‍ಗೆ ಅಧಿಕಾರಿಗಳು ಕಳುಹಿಸಿದ್ದಾರೆ. ಮಧ್ಯಾಹ್ನ 2.30ಕ್ಕೆ ಮನೆ ತಲುಪಿದ ವ್ಯಕ್ತಿ ಸಂಜೆ 5.30 ಕ್ಕೆ ಏಕಾಏಕಿ ಕುಸಿದು ಬಿದ್ದಿದ್ದಾರೆ. ಆತಂಕಗೊಂಡ ಮನೆಯವರು ತಕ್ಷಣ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಈ ಸಂದರ್ಭ ಮೃತಪಟ್ಟಿರುವುದು ಸಾಬೀತಾಗಿದೆ.
Advertisement
Advertisement
ಮಹಾರಾಷ್ಟ್ರದಿಂದ ಬಂದಿರುವ ಕಾರಣ ತಕ್ಷಣ ಜಿಲ್ಲಾಸ್ಪತ್ರೆಗೆ ಮೃತದೇಹವನ್ನು ರವಾನೆ ಮಾಡಲಾಯಿತು. ಮೃತ ವ್ಯಕ್ತಿಯ ಗಂಟಲ ದ್ರವವನ್ನು ತೆಗೆದು ಪರೀಕ್ಷೆ ಮಾಡಿದ ಸಂದರ್ಭದಲ್ಲಿ ಕೊರೊನಾ ಇರುವುದು ದೃಢಪಟ್ಟಿದೆ. 54 ವರ್ಷದ ವ್ಯಕ್ತಿಯಲ್ಲಿ ಯಾವುದೇ ಲಕ್ಷಣಗಳು ಇಲ್ಲದಿರುವುದರಿಂದ ಸಾವಿಗೆ ಕಾರಣ ಏನು ಎನ್ನುವುದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಯಬೇಕಾಗಿದೆ ಎಂದು ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದರು.
Advertisement
Advertisement
ಕುಂದಾಪುರದಲ್ಲಿ ಮಾತನಾಡಿದ ಡಿಸಿ, ಕೆಲ ಪ್ರಕರಣಗಳಲ್ಲಿ ಯಾವುದೇ ಲಕ್ಷಣಗಳು ಇಲ್ಲದಿದ್ದರೂ ಕೊರೊನಾ ಇರುವುದು ಆ ನಂತರ ಸಾಬೀತಾಗುತ್ತದೆ. ಸಾರ್ವಜನಿಕರು ಬಹಳ ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದರು. ಈ ಹಿಂದೆ ಮಹಾರಾಷ್ಟ್ರದಿಂದ ಬಂದ ಕುಂದಾಪುರದ ವ್ಯಕ್ತಿ ಮೇ 14ರಂದು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದರು.