ಉಡುಪಿ: ರಾಜ್ಯಾದ್ಯಂತ ಎಸ್‍ಎಸ್‍ಎಲ್‍ಸಿ ತರಗತಿಗಳು ಆರಂಭಗೊಂಡಿವೆ. ಪ್ರಾಥಮಿಕ ಶಾಲೆ ಮತ್ತು ಪ್ರೌಢಶಾಲೆ ವಿದ್ಯಾಗಮದ ಮೂಲಕ ಪಾಠಗಳು ನಡೆದಿವೆ. ಇದೇ ಸಂದರ್ಭದಲ್ಲಿ ಜಿಲ್ಲೆಯ ಹೆಬ್ರಿ ಮತ್ತು ಬ್ರಹ್ಮಾವರ ತಾಲೂಕಿನ 2 ಶಾಲೆಗಳಲ್ಲಿ ಶಿಕ್ಷಕಿ ಹಾಗೂ ಅಡುಗೆ ಸಿಬ್ಬಂದಿಗೆ ಕೊರೊನಾ ಸೋಂಕು ತಗುಲಿರುವುದು ಆತಂಕ ಸೃಷ್ಟಿಸಿದೆ. ಕೊರೊನಾ ಪ್ರಕರಣ ಪತ್ತೆಯಾದ ಹಿನ್ನೆಲೆ ಶಾಲೆ ತೆರೆಯುವುದಿಲ್ಲ ಎಂದು ಡಿಡಿಪಿಐ ಎಚ್.ಎನ್.ನಾಗೂರ ಸ್ಪಷ್ಟನೆ ನೀಡಿದ್ದಾರೆ.
Advertisement
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೆಬ್ರಿ ತಾಲೂಕಿನ ಶಾಲೆಯೊಂದರಲ್ಲಿ ಶಿಕ್ಷಕೇತರ ಸಿಬ್ಬಂದಿಗೆ ಪಾಸಿಟಿವ್ ಬಂದಿದೆ. ಸಿಬ್ಬಂದಿಯ ಪ್ರಥಮ ಸಂಪರ್ಕದಲ್ಲಿ ಏಳು ಶಿಕ್ಷಕರಿದ್ದಾರೆ. ಹೀಗಾಗಿ ಶಾಲೆಗೆ ಮಕ್ಕಳನ್ನು ಇಂದು ಆಹ್ವಾನಿಸಿಲ್ಲ. ಪ್ರಾಥಮಿಕ ಸಂಪರ್ಕದ ಶಿಕ್ಷಕರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ ಎಂದರು.
Advertisement
Advertisement
ಬ್ರಹ್ಮಾವರ ತಾಲೂಕಿನಲ್ಲಿ ಓರ್ವ ಶಿಕ್ಷಕಿಗೆ ಕೊರೊನಾ ಪಾಸಿಟಿವ್ ಬಂದಿದೆ. ಆದರೆ ಇತರ ಶಿಕ್ಷಕರು ಅವರ ಪ್ರಾಥಮಿಕ ಸಂಪರ್ಕ ಹೊಂದಿಲ್ಲ. ಹೀಗಾಗಿ ಬ್ರಹ್ಮಾವರದ ಶಾಲೆ ತೆರೆಯಲು ಕ್ರಮ ಕೈಗೊಳ್ಳಲಾಗಿದೆ. ಇದೆಲ್ಲದರ ಮಧ್ಯೆ ಜಿಲ್ಲೆಯಾದ್ಯಂತ ಇಂದು ಶಾಲಾ ಪ್ರಾರಂಭೋತ್ಸವದ ಸಂಭ್ರಮ ಶಿಕ್ಷಕರಲ್ಲಿ ಮತ್ತು ಮಕ್ಕಳಲ್ಲಿ ಕಂಡುಬಂತು. ಕೊರೊನಾ ಆತಂಕ ಕೊಂಚ ಕಡಿಮೆಯಾಗುತ್ತಿದ್ದಂತೆ ಶಾಲೆಗಳನ್ನು ತೆರೆಯಲಾಗಿದೆ. ಮಕ್ಕಳ ಆರೋಗ್ಯದ ಜೊತೆಗೆ ಅವರ ಮುಂದಿನ ಭವಿಷ್ಯ ಮುಖ್ಯ ಎಂಬ ಉದ್ದೇಶದಿಂದ ಸರ್ಕಾರ ಶಾಲೆಗಳನ್ನು ತೆರೆದಿದೆ ಎಂದು ಡಿಡಿಪಿಐ ನಾಗೂರ ಹೇಳಿದರು.
Advertisement
ಪ್ರತಿ ಶಾಲೆಯಲ್ಲೂ ಸ್ಯಾನಿಟೈಸರ್, ಸಾಮಾಜಿಕ ಅಂತರದ ಜೊತೆಗೆ ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಂಡು ಶಿಕ್ಷಕರು ಪಾಠ ಮಾಡುತ್ತಾರೆ. ಜಿಲ್ಲೆಯ ಕೆಲ ಶಾಲೆಗಳಿಗೆ ಭೇಟಿ ನೀಡಿದ್ದೇನೆ. ಮಾಸ್ಕ್ ವಿತರಣೆ ಮಾಡಿದ್ದೇವೆ. ತರಗತಿಗಳನ್ನು ಕಡ್ಡಾಯ ಮಾಡಿಲ್ಲ. ಚಂದನ ವಾಹಿನಿ ಮೂಲಕವೂ ಶಿಕ್ಷಣ ಪಡೆಯಬಹುದು ಎಂದು ನಾಗೂರ ಹೇಳಿದರು.