ಹಾಸನ: ಉಚಿತ ಲ್ಯಾಪ್‍ಟಾಪ್ ನೀಡುತ್ತಾರೆ ಎಂದು ವಿದ್ಯಾರ್ಥಿಗಳು ಆಗಮಿಸಿ, ನೂಕುನುಗ್ಗಲು ಉಂಟಾದ ಕಾರಣ ಸ್ಟೀಲ್ ಕಂಬಿ ಮುರಿದು ವಿದ್ಯಾರ್ಥಿಗಳು ಒಬ್ಬರ ಮೇಲೊಬ್ಬರು ಬಿದ್ದ ಘಟನೆ ಹಾಸನದ ಸರ್ಕಾರಿ ಕಲಾ ಕಾಲೇಜಿನಲ್ಲಿ ನಡೆದಿದೆ.
ಸರ್ಕಾರದಿಂದ ಉಚಿತವಾಗಿ ನೀಡಲಾಗುವ ಲ್ಯಾಪ್‍ಟಾಪ್ ಬಂದಿದೆ ಎಂದು ವಿದ್ಯಾರ್ಥಿಗಳು ಕಾಲೇಜಿನ ಬಳಿ ಜಮಾಯಿಸಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಹಾಸನದಲ್ಲಿ ಕೊರೊನಾ ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದು ಇಂದು ಕೂಡ ಸುಮಾರು 325 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇಂತಹ ಸಮಯದಲ್ಲಿ ಕಾಲೇಜು ಆಡಳಿತ ಮಂಡಳಿ ಸಾಮಾಜಿಕ ಅಂತರದ ಬಗ್ಗೆ ಗಮನಹರಿಸದೇ ಇರುವುದು ಸಾರ್ವಜನಿಜರ ಟೀಕೆಗೆ ಕಾರಣವಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದೆ ಲ್ಯಾಪ್‍ಟಾಪ್ ಹಂಚದಂತೆ ಸೂಚಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ. ಕಾಲೇಜಿನಲ್ಲಿ ವಿದ್ಯಾರ್ಥಿಗಳ ದಾಖಲಾತಿ ಆರಂಭವಾಗಿದ್ದು ಅಲ್ಲಿಯೂ ಕಾಲೇಜು ಆಡಳಿತ ಮಂಡಳಿ ಸಾಮಾಜಿಕ ಅಂತರದ ಬಗ್ಗೆ ಗಮನ ಹರಿಸಿಲ್ಲ. ಪರಿಣಾಮ ವಿದ್ಯಾರ್ಥಿಗಳು ಒತ್ತೊತ್ತಾಗಿ ನಿಂತು ದಾಖಲಾತಿಗೆ ಮುಗಿಬಿದ್ದಿದ್ದಾರೆ.