– ಲಾಕ್‍ಡೌನ್ ಎಚ್ಚರಿಕೆ ನೀಡಿದ ಸಚಿವರು
ಬೆಂಗಳೂರು: ಕೊರೊನಾ ಎರಡನೇ ಅಲೆ ಹಿನ್ನೆಲೆ ಸಾರ್ವಜನಿಕರು ಯುಗಾದಿ ಆಚರಣೆಗೆ ಊರುಗಳಿಗೆ ತೆರಳದೇ ಇದ್ದಲ್ಲೇ ಆಚರಿಸಿ. ಈ ಬಾರಿಯ ಯುಗಾದಿಗೆ ಬೇವು- ಕೋವಿಡ್, ಬೆಲ್ಲ-ಲಸಿಕೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು.
ಮಾಧ್ಯಮಗಳ ಜೊತೆ ಮಾತನಾಡಿದ ಸಚಿವರು, ಖಾಸಗಿ ಆಸ್ಪತ್ರೆಗಳ ನಾನಾ ಸಂಘಟನೆಗಳ ಪ್ರತಿನಿಧಿಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ನಡೆಸಲಾಗಿದೆ. ವಾರದೊಳಗೆ ಶೇಕಡಾ 50 ರಷ್ಟು ಬೆಡ್ ಮೀಸಲಿಡಲು ಒಪ್ಪಿದ್ದಾರೆ. ದೊಡ್ಡ ಕಾರ್ಪೋರೇಟ್ ಆಸ್ಪತ್ರೆಯವರು ಹೋಟೆಲ್ ಗಳಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆಯಬೇಕು ಎಂದರು.
ಲಾಕ್‍ಡೌನ್ ಪರಿಸ್ಥಿತಿ ತರದಂತೆ ಜನರು ಸಹಕಾರ ನೀಡಬೇಕು. ನಮಗೆ ನಾವೇ ಲಾಕ್‍ಡೌನ್ ಮಾಡಿಕೊಂಡ್ರೆ ಸರ್ಕಾರದ ಮುಂದೆ ಈ ಆಯ್ಕೆಯೇ ಇರಲ್ಲ. ಲಾಕ್‍ಡೌನ್ ಮಾಡುವ ನಿರ್ಧಾರ ಜನರ ಕೈಯಲ್ಲಿದೆ. ನಾವು ಲಾಕ್‍ಡೌನ್ ಮಾಡ್ತೀವಿ ಅಂತಾ ಹೇಳಿಲ್ಲ. ಕೈ ಮೀರಿದ್ರೆ ನಾವು ಅಸಹಾಯಕರಾಗುತ್ತೇವೆ ಎಂದು ಸಚಿವ ಸುಧಾಕರ್ ಲಾಕ್‍ಡೌನ್ ಎಚ್ಚರಿಕೆ ನೀಡಿದರು.
ಇಂದು ತಜ್ಞರು ಕೊರೊನಾ ಕುರಿತ ವರದಿ ನೀಡಲಿದ್ದಾರೆ. ವರದಿ ಬಂದ ಬಳಿಕ ಮುಖ್ಯಮಂತ್ರಿಗಳ ಜೊತೆ ಕೊರೊನಾ ನಿಯಂತ್ರಣದ ಕುರಿತು ಚರ್ಚೆ ಮಾಡುತ್ತೇವೆ. ನಾನು ಅಥವಾ ಸಿಎಂ ಎಲ್ಲಿಯೂ ಲಾಕ್‍ಡೌನ್ ಮಾಡುತ್ತೇವೆ ಎಂದು ಹೇಳಿಲ್ಲ ಅಂದ್ರು.