– ಕೊಹ್ಲಿ ಎಡಗೈಯಲ್ಲಿ ಬ್ಯಾಟ್ ಮಾಡಿ ತಂಡವನ್ನು ಗೆಲ್ಲಿಸಬಹುದು
ಅಬುಧಾಬಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಬಾರಿ ಐಪಿಎಲ್ ಗೆಲ್ಲುತ್ತದೆ ಎಂದು ಭಾವಿಸಬೇಡಿ ಎಂದು ಇಂಗ್ಲೆಂಡ್ ತಂಡದ ಮಾಜಿ ಆಟಗಾರ ಮೈಕಲ್ ವಾನ್ ಹೇಳಿದ್ದಾರೆ.
ಸೋಮವಾರ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ತಂಡ ಹೀನಾಯವಾಗಿ ಸೋತಿದೆ. ಸತತ ನಾಲ್ಕು ಸೋಲಿನ ನಂತರವೂ ಕೊಹ್ಲಿ ನೇತೃತ್ವದ ಆರ್‌ಸಿಬಿ ತಂಡ ಪ್ಲೇ ಆಫ್‍ಗೆ ಆಯ್ಕೆಯಾಗಿದೆ. ಈ ಮೂಲಕ ಈ ಬಾರಿ ಕಪ್ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದರೆ ಮೈಕಲ್ ವಾನ್ ಮಾತ್ರ ಈ ಬಾರಿ ಆರ್‌ಸಿಬಿ ಕಪ್ ಗೆಲ್ಲುವುದಿಲ್ಲ ಎಂದು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿರುವ ವಾನ್, ನಾನು ಆರಂಭದಿಂದಲೂ ಹೇಳುತ್ತಿದ್ದೇನೆ ಬೆಂಗಳೂರು ತಂಡ ಈ ಬಾರಿ ಕಪ್ ಗೆಲ್ಲುವುದು ಅನುಮಾನ. ಏಕೆಂದರೆ ಟೂರ್ನಿಯುದ್ದಕ್ಕೂ ಆರ್‌ಸಿಬಿ ಕಪ್ ಗೆಲ್ಲುವ ರೀತಿಯ ಪದರ್ಶನ ತೋರಿಲ್ಲ ಎಂದು ವಾನ್ ಹೇಳಿದ್ದಾರೆ. ಇದರ ಜೊತೆಗೆ ಇದು 2020 ಈ ವರ್ಷ ಏನೂ ಬೇಕಾದರೂ ಆಹಬಹುದು. ವಿರಾಟ್ ಕೊಹ್ಲಿಯವರು ಎಡಗೈನಲ್ಲಿ ಬ್ಯಾಟ್ ಮಾಡಿ ತಂಡವನ್ನು ಗೆಲ್ಲಿಸಬಹುದು ಆದರೆ ಅದು ಕಷ್ಟ ಎಂದು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು ತಂಡದಲ್ಲಿ ಮೂರು ನಾಕೌಟ್ ಪಂದ್ಯಗಳಲ್ಲಿ ಒತ್ತಡದ ನಡುವೆಯೂ ಉತ್ತಮವಾಗಿ ಆಡುವ ಆಟಗಾರರು ಇದ್ದಾರೆ. ಆರ್‌ಸಿಬಿ ಬ್ಯಾಟಿಂಗ್ ಲೈನಪ್ ಬಲಿಷ್ಠವಾಗಿದೆ. ಇದರ ಜೊತೆಗೆ ಒತ್ತಡದ ಜೊತೆಗೆ ಆಟವಾಡುವ ಅನುಭವಿ ಆಟಗಾರರು ಇದ್ದಾರೆ. ಬೆಂಗಳೂರು ಪರವಾಗಿ ಮಾತನಾಡಬೇಕು ಎಂದರೆ, ಅವರು ತಾಳ್ಮೆಯ ಜೊತೆಗೆ ಅಕ್ರಮಣಕಾರಿ ಆಟವನ್ನು ಆಡಬೇಕು ಎಂದು ಹೇಳಬಹುದು ಎಂದು ವಾನ್ ತಿಳಿಸಿದ್ದಾರೆ.
ಐಪಿಎಲ್ ಆರಂಭದಲ್ಲಿ ವಿರಾಟ್ ಕೊಹ್ಲಿ ಪಡೆ ಉತ್ತಮ ಪ್ರದರ್ಶನ ನೀಡಿತ್ತು. ಆದರೆ ಕೊನೆಯಲ್ಲಿ ಎಡವಿ ನಾಲ್ಕು ಪಂದ್ಯಗಳನ್ನು ಸತತವಾಗಿ ಕೈಚೆಲ್ಲಿತ್ತು. ಆದರೂ ಆಡಿದ 14 ಪಂದ್ಯದಲ್ಲಿ 7 ಪಂದ್ಯಗಳನ್ನು ಗೆದ್ದು ನೆಟ್ ರನ್ ರೇಟ್ ಆಧಾರದ ಮೇಲೆ ಪ್ಲೇ ಆಫ್‍ಗೆ ಆಯ್ಕೆಯಾಗಿದೆ. ಜೊತೆಗೆ ಆರಂಭಿಕ ದೇವದತ್ ಪಡಿಕ್ಕಲ್, ನಾಯಕ ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಉತ್ತಮ ಲಯದಲ್ಲಿ ಕಾಣಿಸಿಕೊಂಡಿದ್ದು, ತಮ್ಮ ನೆಚ್ಚಿನ ತಂಡ ಕಪ್ ಗೆಲ್ಲುತ್ತದೆ ಎಂದು ಆರ್‌ಸಿಬಿ ಅಭಿಮಾನಿಗಳು ಕಾಯುತ್ತಿದ್ದಾರೆ.