– ಉಪಚುನಾವಣೆ ವೇಳೆ ಪಕ್ಷಕ್ಕೆ ಮುಜುಗರವಾಗಿದೆ
ಗದಗ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಹೈ ಕಮಾಂಡ್ ಹಾಗೂ ರಾಜ್ಯಪಾಲರಿಗೆ ದೂರು ನೀಡಿದ್ದಕ್ಕೆ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ವಿರುದ್ಧ ಬಿಎಸ್‍ವೈ ಬಣದ ಸಚಿವರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈಶ್ವರಪ್ಪನವರ ನಡೆ ಖಂಡಿಸಿ ಇಂದು ಸಚಿವ ಸಿಸಿ ಪಾಟೀಲ್ ಕಿಡಿಕಾರಿದ್ದಾರೆ.
Advertisement
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈಶ್ವರಪ್ಪನವರು ಹೈ ಕಮಾಂಡ್ ಹಾಗೂ ರಾಜ್ಯಪಾಲರಿಗೆ ದೂರು ನೀಡಬಾರದಿತ್ತು. ಇದರಿಂದ ಏನೂ ಪ್ರಯೋಜನವಿಲ್ಲ. ವಿನಾಕಾರಣ ಚರ್ಚೆಗೆ ಅವಕಾಶ ಮಾಡಿಕೊಟ್ಟಂತಿದೆ. ಇಬ್ಬರೂ ಒಂದೇ ಜಿಲ್ಲೆಯವರು, ಭಿನ್ನಾಭಿಪ್ರಾಯಗಳಿದ್ದರೆ ಇಬ್ಬರೂ ಕೂತು ಬಗೆಹರಿಸಿಕೊಳ್ಳಬೇಕಿತ್ತು. ಇದರಿಂದಾಗಿ ಉಪ ಚುನಾವಣೆ ವೇಳೆಯಲ್ಲಿ ಪಕ್ಷಕ್ಕೆ ಮುಜುಗರ ಆಗುತ್ತದೆ, ಇದನ್ನು ಖಂಡಿಸುತ್ತೇನೆ ಎಂದರು.
Advertisement
ಈಶ್ವರಪ್ಪನವರ ಪರ ಸಿದ್ದರಾಮಯ್ಯ ಬ್ಯಾಟಿಂಗ್ ಮಾಡಿದ್ದಕ್ಕೆ ಸಿಸಿ ಪಾಟೀಲ್ ತಿರುಗೇಟು ನೀಡಿ, ಕಾಂಗ್ರೆಸ್ ಟೀಕೆ ಮಾಡಿದರೆ ಈಶ್ವರಪ್ಪನಿಗೆ ಮೆದುಳಿಲ್ಲ ಎನ್ನುವುದು, ನಮ್ಮ ಪಕ್ಷದ ಬಗ್ಗೆ ಮಾತನಾಡಿದಾಗ ಶಹಬ್ಬಾಷ್ ಹೇಳುವುದು. ಸಿದ್ದರಾಮಯ್ಯನವರ ವ್ಯಕ್ತಿತ್ವ ಹೇಗಿದೆ ಎಂಬುದನ್ನು ನೀವೇ ತೂಕಮಾಡಿ ಎಂದರು.
Advertisement
Advertisement
ಈ ವೇಳೆ ಡಿಕೆಶಿ ವಿರುದ್ಧ ಹರಿಹಾಯ್ದ ಅವರು, ಡಿಕೆಶಿ ಮೊದಲು ಸಿಡಿ ಲೇಡಿ ಹಗರಣದ ಬಗ್ಗೆ ಸಮರ್ಪಕವಾದ ಉತ್ತರ ಕೊಡಲಿ. ಸಿಡಿ ಹಗರಣದಲ್ಲಿ ಅವರ ಪಾತ್ರ ಏನು ಎಂಬುದರ ಬಗ್ಗೆ ಉತ್ತರಿಸಲಿ. ಮೊದಲು ಅವರ ಪಕ್ಷ ಭದ್ರ ಮಾಡಿಕೊಳ್ಳಲಿ. ಯಡಿಯೂರಪ್ಪನವರ ಸರ್ಕಾರ ಅತ್ಯಂತ ಸುಭದ್ರ ಇದೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ, ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಸಂಗಮೇಶ ದುಂದೂರ ಇದ್ದರು.