– ವಿವಿಯ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗದಿಂದ ಸಾಧನ ಅಭಿವೃದ್ಧಿ
– ನಗರ ಪ್ರದೇಶದಲ್ಲಿ ಒಣಗಿದ ಈರುಳ್ಳಿಗೆ ಫುಲ್ ಡಿಮ್ಯಾಂಡ್
ರಾಯಚೂರು: ಈರುಳ್ಳಿ ಬೆಲೆ ಯಾವಾಗ ಗಗನಕ್ಕೇರುತ್ತೋ ಅದ್ಯಾವಾಗ ಪಾತಾಳಕ್ಕೆ ಇಳಿಯುತ್ತೋ ಗೊತ್ತಿಲ್ಲ. ಬೆಲೆ ಹೆಚ್ಚಾದಾಗ ರೈತರಿಗಿಂತ ದಲ್ಲಾಳಿಗಳೇ ಹೆಚ್ಚು ಲಾಭ ಪಡಿತಾರೆ. ಆದ್ರೆ ಬೆಲೆ ಇಳಿಕೆಯಾದಾಗ ರೈತರ ಪರಸ್ಥಿತಿ ಮಾತ್ರ ಹೇಳತೀರದು. ಲಾಕ್‍ಡೌನ್ ಸಮಯದಲ್ಲಂತೂ ರೈತರು ತೀವ್ರ ಸಂಕಷ್ಟ ಎದುರಿಸಿದರು. ಹೀಗಾಗೆ ಈರುಳ್ಳಿ ಬೆಳೆಗಾರರಿಗಾಗಿ ರಾಯಚೂರು ಕೃಷಿ ವಿಜ್ಞಾನಗಳ ವಿವಿ ಹೊಸ ತಂತ್ರಜ್ಞಾನವನ್ನ ಅಭಿವೃದ್ಧಿ ಪಡಿಸಿದೆ.
Advertisement
ವಿಶ್ವ ವಿದ್ಯಾಲಯದ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗ ಈರುಳ್ಳಿ ಕತ್ತರಿಸಿ ಒಣಗಿಸುವ ತಂತ್ರಜ್ಞಾನವನ್ನ ರೈತರಿಗೆ ಪರಿಚಯಿಸುತ್ತಿದೆ. ಈ ಹೊಸ ಸಾಧನದಿಂದ ಈರುಳ್ಳಿ ಬೆಲೆ ಕುಸಿತವಾದಾಗ ಕೆಡದಂತೆ ಒಣಗಿಸಿ 9 ತಿಂಗಳ ಕಾಲ ಇಡಬಹುದು. ಯಾವಾಗ ಬೇಕು ಆಗ ಒಣಗಿದ ಈರುಳ್ಳಿಯನ್ನ ಪುನಃ ಬಳಸಿಕೊಳ್ಳಬಹುದು. ಯಾವ ಕಾಲದಲ್ಲಾದರೂ ಈ ತಂತ್ರಜ್ಞಾನ ಬಳಸಿ ಈರುಳ್ಳಿ ಸಂಗ್ರಹಿಡಬಹುದಾಗಿದೆ. ನೇರವಾಗಿ ಸೂರ್ಯನ ಬಿಸಿಲಿಗೆ ಒಣಗಿಸುವ ಸಮಯದ ಅರ್ಧ ಸಮಯದಲ್ಲೇ ಒಣಗಿಸಿ, ಬಣ್ಣ ಹಾಗೂ ಪೋಷಕಾಂಶಗಳು ಹಾಗೇ ಉಳಿಯುವಂತೆ ಮಾಡಬಹುದು.
Advertisement
Advertisement
ರೈತರು ಗ್ರಾಮೀಣ ಭಾಗದಲ್ಲೇ ಈ ಸಾಧನ ಬಳಸಿ ಈರುಳ್ಳಿಯನ್ನ ಸಂಗ್ರಹಿಸಿಡಬಹುದಾಗಿದೆ. ಪ್ಯಾಕೆಟ್ ಗಳನ್ನ ಮಾಡಿ ನಗರ, ಮಹಾನಗರ ಪ್ರದೇಶಗಳಲ್ಲಿ ಒಣಗಿದ ಈರುಳ್ಳಿ ಮಾರಾಟ ಮಾಡಬಹುದು. ಫಾಸ್ಟ್ ಪುಡ್ ಸೆಂಟರ್, ರೆಸ್ಟೋರೆಂಟ್, ಮನೆಗಳಲ್ಲೂ ಸಹ ಇದನ್ನ ಬಳಸಬಹುದಾಗಿದೆ. 100 ಕೆ.ಜಿ ಹಾಗೂ 1000 ಕೆ.ಜಿ ಈರುಳ್ಳಿ ಕತ್ತರಿಸುವ ಸಾಮರ್ಥ್ಯದ ಎರಡು ಯಂತ್ರಗಳನ್ನ ಸದ್ಯ ಅಭಿವೃದ್ಧಿ ಪಡಿಸಲಾಗಿದೆ. ಎರಡೂ ಯಂತ್ರಗಳಿಗೂ 50% ಸಬ್ಸಿಡಿ ಇದೆ. 100 ಕೆ.ಜಿ ಯ ಯಂತ್ರದ ಬೆಲೆ 55 ಸಾವಿರ ರೂಪಾಯಿ ಇದ್ದು 27 ಸಾವಿರ ರೂಪಾಯಿವರೆಗೆ ಸಬ್ಸಿಡಿ ಸಿಗುತ್ತೆ. 1000 ಕೆ.ಜಿ ಯಂತ್ರದ ಬೆಲೆ 5 ವರೆಗೆ ಲಕ್ಷ ರೂಪಾಯಿ ಇದ್ದು 2 ಲಕ್ಷ 70 ಸಾವಿರ ರೂಪಾಯಿವರೆಗೆ ಸಬ್ಸಿಡಿ ಸಿಗುತ್ತದೆ. ಹೀಗಾಗಿ ಈರುಳ್ಳಿ ಬೆಳೆಗಾರರಿಗೆ ಇದು ಉಪಯುಕ್ತವಾಗಲಿದೆ ಅಂತ ಕೃಷಿ ವಿಜ್ಞಾನಗಳ ವಿವಿಯ ಸಂಸ್ಕರಣೆ ಹಾಗೂ ಆಹಾರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಹಾಗೂ ಪ್ರಾಧ್ಯಾಪಕ ಉದಯಕುಮಾರ್ ನಿಡೋಣಿ ಹೇಳಿದ್ದಾರೆ.
Advertisement
ಈರುಳ್ಳಿ ಕತ್ತರಿಸುವ ಯಂತ್ರದಲ್ಲಿ 5 ರಿಂದ 6 ಎಂಎಂ ಗಾತ್ರದಲ್ಲಿ ಕತ್ತರಿಸಿ, ಮೆಕ್ಯಾನಿಕಲ್ ಅಥವಾ ಸೋಲಾರ್ ಒಣಗಿಸುವ ತಂತ್ರದಿಂದ ಒಣಗಿಸಬೇಕು. ಒಂದು ಕೆ.ಜಿ ಒಣಗಿದ ಈರುಳ್ಳಿ ತಯಾರಿಕೆಗೆ 8 ರಿಂದ 10 ಕೆ.ಜಿ. ಈರುಳ್ಳಿ ಕತ್ತರಿಸಬೇಕಾಗುತ್ತದೆ. ಒಂದು ಕೆ.ಜಿಗೆ 150 ರಿಂದ 180 ರೂಪಾಯಿವರೆಗೆ ಮಾರಾಟ ಮಾಡಬಹುದು. ಬೆಲೆ ಏರಿಕೆಗೆ ಅನುಗುಣವಾಗಿ ಒಣಗಿದ ಈರುಳ್ಳಿ ಬೆಲೆಯಲ್ಲೂ ವ್ಯತ್ಯಾಸವಾಗುತ್ತದೆ. ಆದ್ರೆ ರೈತರು ತಮಗಾಗುವ ನಷ್ಟವನ್ನ ಮಾತ್ರ ತಪ್ಪಿಸಿಕೊಳ್ಳಬಹುದಾಗಿದೆ.
ಈರುಳ್ಳಿ ಬೆಲೆ ಪಾತಾಳಕ್ಕೆ ಇಳಿದಾಗಲೆಲ್ಲಾ ಬೆಳೆಗಾರರು ವೈಜ್ಞಾನಿಕ ಬೆಲೆ ನಿಗದಿಗೆ ಆಗ್ರಹಿಸಿ ಹೋರಾಟ ಮಾಡುತ್ತಲೇ ಇರುತ್ತಾರೆ. ಆದ್ರೆ ಸರ್ಕಾರ ರೈತರ ಸಹಾಯಕ್ಕೆ ಬರುವ ವೇಳೆಗೆ ಸಾಕಷ್ಟು ರೈತರು ನಷ್ಟ ಅನುಭವಿಸಿರುತ್ತಾರೆ. ಆದ್ರೆ ಈರುಳ್ಳಿಯನ್ನ ಸಂಗ್ರಹಿಸಿಟ್ಟು ಮಾರಾಟ ಮಾಡುವ ಈ ಹೊಸ ತಂತ್ರಜ್ಞಾನ ಎಲ್ಲಾ ರೈತರ ಕೈಗೆಟುಕಿದರೆ ನಷ್ಟವನ್ನ ತಪ್ಪಿಸಬಹುದು.