ನವದೆಹಲಿ: ದಯವಿಟ್ಟು ನನ್ನ ಈಗ ಬಿಟ್ಟುಬಿಡಿ. ಮುಂದಿನ ವಾರ ಸಿಗೋಣ ಎಂದು ಮಾಧ್ಯಮದವರ ಮುಂದೆ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಕೈ ಮುಗಿದು ಬೇಡಿಕೊಂಡಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ರಾಜೀನಾಮೆ ಬಗ್ಗೆ ಪ್ರಶ್ನಿಸಲು ತೆರಳಿದಾಗ, ಅರುಣ್ ಸಿಂಗ್ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಈ ಮೂಲಕ ಯಡಿಯೂರಪ್ಪ ಅವರು ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಹೈಕಮಾಂಡ್ ಕೂಡ ಅದೇ ಸುಳಿವು ನೀಡಿದಂತಾಗಿದೆ.
ಈ ಹಿಂದೆ ಅರುಣ್ ಸಿಂಗ್ ಅವರು ಬಿಎಸ್ ವೈ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅವರು ಪೂರ್ಣಾವಧಿ ಸಿಎಂ ಆಗಿರುತ್ತಾರೆ ಎಂದು ಹೇಳಿದ್ದರು. ಆದರೆ ಇಂದು ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಈ ಮೂಲಕ ಮೊದಲ ಬಾರಿ ಬಿಎಸ್‍ವೈ ರಾಜೀನಾಮೆ ವಿಚಾರವಾಗಿ ಉಸ್ತುವಾರಿ ಮೌನಕ್ಕೆ ಶರಣಾದರು. ಸದ್ಯ ಅರುಣ್ ಸಿಂಗ್ ಮೌನ ಬಿಎಸ್‍ವೈ ರಾಜೀನಾಮೆ ಸಂಕೇತವೇ ಎಂಬ ಪ್ರಶ್ನೆ ಮೂಡಿದೆ. ಇದನ್ನೂ ಓದಿ: ಜುಲೈ 25ರ ಬಳಿಕ ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುತ್ತೇನೆ: ಬಿಎಸ್‍ವೈ
ಇತ್ತ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಬಿಎಸ್‍ವೈ, ಜುಲೈ 25ರ ನಂತರ ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳುತ್ತೇನೆ. ನನ್ನ ಪರ ಪ್ರತಿಭಟನೆ ನಡೆಸುವುದು ಸರಿಯಲ್ಲ. ಹೈಕಮಾಂಡ್ ಏನು ಹೇಳುತ್ತದೆಯೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳುವ ಮೂಲಕ ರಾಜೀನಾಮೆ ನೀಡುವುದರ ಕುರಿತು ಸುಳಿವು ನೀಡಿದ್ದಾರೆ. ಇದನ್ನೂ ಓದಿ: ಹೈಕಮಾಂಡ್ ಕೈ ಸೇರಿದೆ ವರದಿ – ಜಾತಿ ಚೌಕಟ್ಟು ಮೀರುತ್ತಾ ಬಿಜೆಪಿ?
ಹೈಕಮಾಂಡ್ ಏನು ಹೇಳುತ್ತದೆಯೋ ಅದೇ ಅಂತಿಮ. ಕಾರ್ಯಕರ್ತರು ಗೊಂದಲಕ್ಕೆ ಒಳಗಾಗಬಾರದು. ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧನಾಗಿರುತ್ತೇನೆ. ಜುಲೈ 25ರ ಹೈಕಮಾಂಡ್ ಸಂದೇಶಕ್ಕೆ ಕಾಯುತ್ತಿದ್ದೇನೆ. ನನ್ನ ಕೆಲಸ ಮೆಚ್ಚಿ ವರಿಷ್ಠರು 75 ವರ್ಷ ಆದ ಬಳಿಕ 78 ರವರೆಗೂ ಅಧಿಕಾರಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಮುಂದೆ ಪಕ್ಷ ಮತ್ತೆ ಅಧಿಕಾರಕ್ಕೆ ತರೋದು ನನ್ನ ಸಂಕಲ್ಪ. 26 ಕ್ಕೆ ಸರ್ಕಾರದ ಸಾಧನೆ ಬಗ್ಗೆ ವಿಶೇಷ ಕಾರ್ಯಕ್ರಮ ಇಟ್ಟುಕೊಂಡಿದ್ದೇವೆ. ಈ ಕಾರ್ಯಕ್ರಮ ಬಳಿಕ ವರಿಷ್ಠರ ಸೂಚನೆಯಂತೆ ನಡ್ಕೋತೇನೆ. ವರಿಷ್ಠರ ತೀರ್ಮಾನವೇ ನನ್ನ ತೀರ್ಮಾನ ಎಂದು ಬಿಎಸ್‍ವೈ ತಿಳಿಸಿದರು. ಇದನ್ನೂ ಓದಿ: ನನ್ನ ಪರವಾಗಿ ಯಾರೂ ಪ್ರತಿಭಟನೆಗೆ ಮುಂದಾಗಬಾರದು – ಬಿಎಸ್‍ವೈ ಮನವಿ