ಇಹಲೋಕದ ತ್ಯಜಿಸಿದ ಚಿರಂಜೀವಿಗೆ ರಾಜಕೀಯ ಗಣ್ಯರಿಂದ ಸಂತಾಪ

Public TV
2 Min Read
chiru sarja

ಬೆಂಗಳೂರು: ಇಂದು ಸಾವನ್ನಪ್ಪಿದ ನಟ ಚಿರಂಜೀವಿ ಸರ್ಜಾ ಅವರಿಗೆ ರಾಜ್ಯ ರಾಜಕೀಯ ನಾಯಕರು ಸಂತಾಪ ಸೂಚಿಸಿದ್ದಾರೆ.

ಇಂದು ಬೆಂಗಳೂರಿನ ಅಪೊಲೋ ಆಸ್ಪತ್ರೆಯಲ್ಲಿ ತಮ್ಮ 39ನೇ ವರ್ಷಕ್ಕೆ ನಟ ಚಿರಂಜೀವಿ ಸರ್ಜಾ ಅವರು ಚಿರನಿದ್ರೆಗೆ ಜಾರಿದ್ದಾರೆ. ಚಿರು ಸಾವಿಗೆ ಇಡೀ ಕನ್ನಡ ಚಿತ್ರರಂಗವೇ ಕಂಬನಿ ಮಿಡಿದಿದೆ. ಜೊತೆಗೆ ಹಿರಿಯ ರಾಜಕಾರಣಿಗಳಾದ ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಮತ್ತು ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಅವರು ಕೂಡ ಸಂತಾಪ ಸೂಚಿಸಿದ್ದಾರೆ.

ಈ ವಿಚಾರವಾಗಿ ಟ್ವೀಟ್ ಮಾಡಿರುವ ಯಡಿಯೂರಪ್ಪನವರು, ಕನ್ನಡದ ಖ್ಯಾತ ಕಲಾವಿದ, ಶ್ರೀ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಮೃತಪಟ್ಟ ಸುದ್ದಿ ತಿಳಿದು ತೀವ್ರ ಆಘಾತವಾಗಿದೆ. ಕೇವಲ 39 ವರ್ಷದ ವಯಸ್ಸಿನಲ್ಲಿ ಅಕಾಲಿಕವಾಗಿ ವಿಧಿವಶರಾಗಿರುವುದು ದಿಗ್ಭ್ರಮೆ ಮೂಡಿಸಿದೆ. ದೇವರು ಅವರಿಗೆ ಸದ್ಗತಿಯನ್ನು, ಅವರ ಕುಟುಂಬ, ಅಪಾರ ಅಭಿಮಾನಿ ವರ್ಗಕ್ಕೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

ಕನ್ನಡ ಚಿತ್ರರಂಗದ ಉದಯೋನ್ಮುಖ ನಟರಾದ ಚಿರಂಜೀವಿ ಸರ್ಜಾ ಅವರು ನಿಧನರಾದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ಇವರ ಅಗಲಿಕೆಯಿಂದ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ದೇವರು ಅವರಿಗೆ ಚಿರಶಾಂತಿ ಕರುಣಿಸಲಿ. ಅವರ ಕುಟುಂಬ ಹಾಗೂ ನಾಡಿನ ಜನತಗೆ ಈ ದುಃಖವನ್ನು ಭರಿಸುವ ಶಕ್ತಿ ಆ ಭಗವಂತ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಟ್ವೀಟ್ ಮಾಡುವ ಮೂಲಕ ಸಂತಾಪ ಸೂಚಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ ಅವರು ಟ್ವೀಟ್ ಮಾಡಿ, ಕನ್ನಡ ಚಿತ್ರರಂಗದ ಯುವ ನಟ ಚಿರಂಜೀವಿ ಸರ್ಜಾ ಅವರ ಸಾವಿನ ಸುದ್ದಿ ನೋವುಂಟುಮಾಡಿದೆ. ಇನ್ನಷ್ಟು ಕಾಲ ನಟಿಸುತ್ತಾ, ಎಲ್ಲರನ್ನು ರಂಜಿಸುತ್ತಾ ನಮ್ಮ ನಡುವೆ ಈ ಹುಡುಗ ಇರಬೇಕಿತ್ತು. ಅವರ ದುಃಖತಪ್ತ ಕುಟುಂಬ ವರ್ಗದವರಿಗೆ ಹಾಗೂ ಅಭಿಮಾನಿಗಳಿಗೆ ನನ್ನ ಸಂತಾಪಗಳು ಎಂದು ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು, ಚಂದನವನದ ಪ್ರತಿಭಾವಂತ ನಟ ಚಿರಂಜೀವಿ ಸರ್ಜಾ ಅವರ ನಿಧನದ ಸುದ್ದಿ ಕೇಳಿ ಆಘಾತವಾಗಿದೆ. ಇನ್ನೂ ಬಾಳಿ, ಬದುಕಿ ನಮ್ಮೆಲ್ಲರನ್ನೂ ತನ್ನ ನಟನೆಯ ಮೂಲಕ ರಂಜಿಸಬೇಕಿದ್ದ ಈ ಯುವ ನಾಯಕ ನಟನ ಅಗಲಿಕೆಯ ದುಃಖ ಭರಿಸುವ ಶಕ್ತಿಯನ್ನು ಆ ಭಗವಂತನು ಅವರ ಕುಟುಂಬ ಹಾಗೂ ಅಭಿಮಾನಿಗಳಿಗೆ ನೀಡಲೆಂದು ಪ್ರಾರ್ಥಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ನಟ ಚಿರಂಜೀವಿ ಸರ್ಜಾ ನಿಧನ ತೀವ್ರ ದುಃಖ ತರಿಸಿದೆ. ಚಿತ್ರರಂಗದಲ್ಲಿ ಬೆಳಗಬೇಕಿದ್ದ ತಾರೆಗೆ ಒದಗಿದ ಸ್ಥಿತಿ ಬೇಸರದಾಯಕ. ಕಲೆಗೆ ಇಡೀ ತಲೆಮಾರುಗಳನ್ನೇ ಮುಡುಪಾಗಿಟ್ಟ ಸರ್ಜಾ ಕುಟುಂಬದ ಕುಡಿ ಚಿರಂಜೀವಿ. ಅವರ ಕುಟುಂಬವೇ ಒಂದು ನಕ್ಷತ್ರಪುಂಜ. ಅದರಲ್ಲಿ ಬೆಳಗುತ್ತಿದ್ದ ಚಿರಂಜೀವಿ ಎಂಬ ತಾರೆಯ ದಿಢೀರ್ ಕಣ್ಮರೆ ತೀರ ನೋವಿನ ಸಂಗತಿ. ಪ್ರಖ್ಯಾತ ಕಲಾ ಕುಟುಂಬದಿಂದ ಬಂದಿದ್ದ ಚಿರಂಜೀವಿ ಸರ್ಜಾ ಕುಟುಂಬ, ಚಿತ್ರರಂಗಕ್ಕೆ ಸೇವೆ ಸಲ್ಲಿಸಿದ್ದ ಸುಂದರ್ ರಾಜ್ ಕುಟುಂಬದೊಂದಿಗೆ ಬೆರೆತಿತ್ತು. ಹಾಲು ಜೇನಿನಂತೆ ಕೂಡಿದ್ದ ಈ ಕುಟುಂಬಕ್ಕೆ ಚಿರಂಜೀವಿ ಅವರ ಅಗಲಿಕೆಯ ನೋವು ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಹೆಚ್‍ಡಿಕೆ ಟ್ವೀಟ್ ಮಾಡಿದ್ದಾರೆ.

ಅಂತಯೇ ಸಚಿವರಾದ ಜಗದೀಶ್ ಶೆಟ್ಟರ್, ಶಾಸಕ ಯು.ಟಿ ಖಾದರ್, ವೈದ್ಯಕೀಯ ಶಿಕ್ಷಣ ಸಚಿವ ಸುಧಾಕರ್ ಮತ್ತು ಡಿಸಿಎಂ ಅಶ್ವಥ್ ನಾರಾಯಣ್, ಲಕ್ಷ್ಮಣ ಸವದಿ ಸೇರಿದಂತೆ ಹಲವಾರು ರಾಜಕೀಯ ಗಣ್ಯ ನಾಯಕರು ಚಿರು ಸಾವಿಗೆ ಸಂತಾಪ ಸೂಚಿಸಿದ್ದಾರೆ. ಚಿರು ಅವರ ಅಂತ್ಯಕ್ರಿಯೆ ಅವರ ಹುಟ್ಟೂರು ಮಧುಗಿರಿಯ ಜಕ್ಕೇನಹಳ್ಳಿಯಲ್ಲಿ ನಡೆಯಲಿದೆ.

Share This Article
Leave a Comment

Leave a Reply

Your email address will not be published. Required fields are marked *