ಯಾದಗಿರಿ: ಕೋವಿಡ್ ಸಂಕಷ್ಟಕ್ಕೆ ನೆರವಾಗುವ ದೃಷ್ಟಿಯಿಂದ, ಇಸ್ರೇಲ್ ನೀಡಿದ ಆಕ್ಸಿಜನ್ ಕಂಟೇನರ್ ಯಾದಗಿರಿಯಲ್ಲಿ ಕಾರ್ಯಾರಂಭ ಮಾಡಿದೆ.
ಭಾರತಕ್ಕೆ ಒಟ್ಟು ಮೂರು ಆಕ್ಸಿಜನ್ ಕಂಟೇನರ್‍ಗಳನ್ನು ಇಸ್ರೇಲ್ ಕೊಡುಗೆ ನೀಡಿದೆ. ಅದರಲ್ಲಿ ಎರಡು ಕಂಟೇನರ್ ಕರ್ನಾಟಕದ ಪಾಲಾಗಿದ್ದು, ಡಿಸಿ ರಾಗ ಪ್ರಿಯರ ಸತತ ಪ್ರಯತ್ನದಿಂದ ಕೇಂದ್ರ ಸರ್ಕಾರದ ಮನವೊಲಿಸಿ ಒಂದು ಕಂಟೇನರ್‍ರನ್ನು ಯಾದಗಿರಿಗೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೊಂದು ಕೋಲಾರದ ಪಾಲಾಗಿದೆ.
ಕಳೆದ ಒಂದು ವಾರದಿಂದ ವಿಶೇಷ ಎಂಜಿನಿಯರ್ಸ್ ತಂಡ ಕಂಟೇನಿಯರ್ ಜೋಡಣೆ ಮಾಡಿದೆ. ಬಹು ಕೋಟಿ ವೆಚ್ಚದ ಹೈಟೆಕ್ ಆಕ್ಸಿಜನ್ ಕಂಟೇನರ್ ಇದಾಗಿದ್ದು, ನಿಮಿಷಕ್ಕೆ 500 ಲೀಟರ್ ಮತ್ತು ದಿನಕ್ಕೆ 7,20,000 ಲೀಟರ್ ಆಕ್ಸಿಜನ್ ಉತ್ಪಾದನೆ ಮಾಡುತ್ತದೆ. ಇದರಿಂದ 70 ಸೋಂಕಿತರಿಗೆ 24 ಗಂಟೆಗಳ ಕಾಲ ಆಕ್ಸಿಜನ್ ನೀಡಬಹುದು.
ಕಂಟೇನರ್ ಇಂದು ಅಧಿಕೃತವಾಗಿ ಕಾರ್ಯಾರಂಭ ಮಾಡಿದ್ದು, ಈ ಬಗ್ಗೆ ಮಾತನಾಡಿದ ಡಿಸಿ ಡಾ. ರಾಗಪ್ರಿಯರವರು ಭಾರತ ಮತ್ತು ಇಸ್ರೇಲ್ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ. ಈ ವೇಳೆ ಡಿಎಸ್‍ಓ ಸಂಜೀವ್ ರಾಯಚೂರಕರ್, ಕಂಟೇನರ್ ಮೇಲ್ವಿಚಾರಕ ಡಾ. ಶ್ರೀನಿವಾಸ್ ಉಪಸ್ಥಿತರಿದ್ದರು.