ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಶುಭಾ ಪೂಂಜಾ ಶೀಘ್ರದಲ್ಲೇ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ. ಇದೀಗ ನಟಿ ತಾವು ಮದುವೆಯಾಗುವ ಹುಡುಗನನ್ನು ಪರಿಚಯಿಸಿ, ವಿವಾಹ ಯಾವಾಗ ಎಂದು ರಿವೀಲ್ ಮಾಡಿದ್ದಾರೆ.
ನಟಿ ಶುಭಾ ಪೂಂಜಾ ಮೊದಲಿಗೆ ತನ್ನ ಫೇಸ್‍ಬುಕ್ ಪೇಜಿನಲ್ಲಿ, “ನಾನು ಮದುವೆ ಆಗುವ ಹುಡುಗ, ನಿಮ್ಮ ಪ್ರೀತಿ ಸದಾ ನಮ್ಮ ಮೇಲೆ ಇರಲಿ” ಎಂದು ಬರೆದು ತಮ್ಮ ಹುಡುಗನ ಫೋಟೋವನ್ನು ಅಪ್ಲೋಡ್ ಮಾಡಿ ಅಭಿಮಾನಿಗಳಿಗೆ ಪರಿಚಯಿಸಿದ್ದಾರೆ.
ಇನ್ನೂ ತಮ್ಮ ಹುಡುಗನ ಜೊತೆ ಫೋಟೋಶೂಟ್ ಮಾಡಿಸಿಕೊಂಡಿದ್ದು, ಆ ಫೋಟೋಗಳನ್ನು ಇನ್‍ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಜೊತೆಗೆ “ನಾನು ಮದುವೆಯಾಗುತ್ತಿರುವ ಹುಡುಗ ಸುಮಂತ್ ಬಿಲ್ಲವ ಜೊತೆಗಿನ ಫೋಟೋಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. ನಾನು ಒಂದು ದಿನ ತಡವಾಗಿ ಈ ವಿಚಾರವನ್ನು ನಿಮ್ಮ ಜೊತೆ ಶೇರ್ ಮಾಡಿಕೊಳ್ಳುತ್ತಿದ್ದೇನೆ ಎಂದು ನನಗೆ ತಿಳಿದಿದೆ. ಬಹುಶಃ ನಾವು ಲಾಕ್‍ಡೌನ್ ಮುಗಿದ ನಂತರ ಡಿಸೆಂಬರಿನಲ್ಲಿ ಮದುವೆಯಾಗುತ್ತೇವೆ” ಎಂದು ಬರೆದುಕೊಂಡಿದ್ದಾರೆ.
ಈ ಮೂಲಕ ನಟಿ ಶುಭಾ ಪೂಂಜಾ ಇದೇ ವರ್ಷ ಡಿಸೆಂಬರಿನಲ್ಲಿ ತಮ್ಮ ಪ್ರಿಯಕರನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ನಟಿ ಶುಭಾ ಪೂಂಜಾ ಕೈ ಹಿಡಿಯುತ್ತಿರುವ ಸುಮಂತ್ ಬಿಲ್ಲವ ಮಂಗಳೂರು ಮೂಲದವರಾಗಿದ್ದು, ಜಯಕರ್ನಾಟಕ ಬೆಂಗಳೂರು ದಕ್ಷಿಣ ಭಾಗದ ಅಧ್ಯಕ್ಷರಾಗಿದ್ದಾರೆ. ಅಲ್ಲದೇ ಸುಮಂತ್ ಬಿಸಿನೆಸ್ ಮ್ಯಾನ್ ಕೂಡ ಆಗಿದ್ದಾರೆ.
ಸುಮಂತ್ ಮತ್ತು ಶುಭಾ ಪೂಂಜಾ ಇಬ್ಬರು ಪರಸ್ಪರ ಒಂದು ವರ್ಷದಿಂದ ಪ್ರೀತಿಸುತ್ತಿದ್ದರು. ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಕುಟುಂಬದವರ ಬಳಿ ಹೇಳಿಕೊಂಡಿದ್ದಾರೆ. ಎರಡು ಕುಟುಂಬದರು ಇವರ ಪ್ರೀತಿ ಒಪ್ಪಿಗೆ ಸೂಚಿಸಿದ್ದಾರೆ.
https://www.instagram.com/p/CBezInIjDJE/?igshid=nqctlsy8dsvo
ನಟಿ ಶುಭಾ ಪೂಂಜಾ ‘ಜಾಕ್ ಪಾಟ್’ ಸಿನಿಮಾದ ಮೂಲಕ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಟ್ಟಿದ್ದು, ಸುಮಾರು 20ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು ಚಿತ್ರರಂಗದಲ್ಲಿ ಶುಭಾಪೂಂಜಾ ಗುರುತಿಸಿಕೊಂಡಿದ್ದಾರೆ.