ಇಸ್ಲಾಮಾಬಾದ್: ಪಾಕಿಸ್ತಾನ ಪ್ರಧಾನಿ, ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಡ್ರಗ್ ತೆಗೆದುಕೊಂಡು ಕ್ರಿಕೆಟ್ ಆಡುತ್ತಿದ್ದ ಎಂದು ಪಾಕ್ ಮಾಜಿ ವೇಗದ ಬೌಲರ್ ಸರ್ಫಾರಾಜ್ ನವಾಜ್ ಆರೋಪಿಸಿದ್ದಾರೆ.
1970-80ರ ದಶಕದಲ್ಲಿ ಪಾಕಿಸ್ತಾನ ತಂಡದಲ್ಲಿ ನವಾಜ್ ಹಾಗೂ ಇಮ್ರಾನ್ ಖಾನ್ ಅಗ್ರ ವೇಗದ ಬೌಲರ್ ಗಳಾಗಿ ಗುರುತಿಸಿಕೊಂಡಿದ್ದರು. ಇಮ್ರಾನ್ ಖಾನ್ ಕುರಿತು ನವಾಜ್ ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇಮ್ರಾನ್ ಡ್ರಗ್ ಸೇವಿಸುತ್ತಿದದ್ದು ನಾನು ಮಾತ್ರ ನೋಡಿಲ್ಲ. ನಾನು ಹೇಳಿರುವುದು ಸುಳ್ಳು ಎಂದಾದರೆ ನ್ಯಾಯಾಲಯಕ್ಕೆ ನನ್ನನ್ನು ಎಳೆಯಲು ಅವರು ಸ್ವತಂತ್ರರು ಎಂದು ನವಾಜ್ ಹೇಳಿದ್ದಾರೆ.
1987ರ ಘಟನೆ ಕುರಿತು ಮಾತನಾಡಿರುವ ಸರ್ಫಾರಾಜ್ ನವಾಜ್, ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ಇಮ್ರಾನ್ ಖಾನ್ ಬೌಲಿಂಗ್ ಮಾಡಲು ಸಮಸ್ಯೆ ಎದುರಿಸಿದ್ದ. ಈ ವೇಳೆ ಇಸ್ಲಾಮಾಬಾದ್‍ನ ಮನೆಗೆ ಬಂದ ಇಮ್ರಾನ್ ಗಾಂಜಾ ಸೇವಿಸಿದ್ದ ಎಂದು ಹೇಳಿದ್ದಾರೆ.
ಇಮ್ರಾನ್ ಖಾನ್ ಕೇವಲ ಗಾಂಜಾ ಮಾತ್ರವಲ್ಲದೇ ಕೊಕೇನ್ ಕೂಡ ತೆಗದುಕೊಳ್ಳುತ್ತಿದ್ದ. 1987 ರಲ್ಲಿ ಲಂಡನ್‍ನಲ್ಲಿ ನಡೆದ ಪಂದ್ಯದಲ್ಲಿ ಆತ ಉತ್ತಮ ಬೌಲಿಂಗ್ ಪ್ರದರ್ಶನ ನೀಡುತ್ತಿರಲಿಲ್ಲ. ಆ ವೇಳೆ ನನ್ನ ಮನೆಗೆ ಬಂದು ಅಲ್ಲಿಯೂ ಡ್ರಗ್ ಸೇವನೆ ಮಾಡಿದ್ದ. ಈ ವೇಳೆ ಮೊಹ್ಸಿನ್ ಖಾನ್, ಅಬ್ದುಲ್ ಖಾದಿರ್, ಸಲೀಮ್ ಮಲಿಕ್ ಕೂಡ ಜೊತೆಯಲ್ಲಿ ಆಗಮಿಸಿದ್ದರು ಎಂದು ನವಾಜ್ ಆರೋಪಿಸಿದ್ದಾರೆ.
ನನ್ನ ಮಾತುಗಳು ಸುಳ್ಳು ಎನ್ನುವುದಾದರೆ, ಆತ ನನ್ನ ಮುಂದೆ ಬಂದು ಸಮರ್ಥನೆ ಮಾಡಿಕೊಳ್ಳಲಿ. ಆತ ಡ್ರಗ್ ಸೇವನೆ ಮಾಡುವುದನ್ನು ನಾನು ಒಬ್ಬನೇ ನೋಡಿಲ್ಲ, ಲಂಡನ್‍ನಲ್ಲಿ ಹಲವರು ನೋಡಿದ್ದಾರೆ ಎಂದು ನವಾಜ್ ವಿಡಿಯೋದಲ್ಲಿ ಹೇಳಿದ್ದಾರೆ.
ಇಮ್ರಾನ್ ಖಾನ್ 1990ರ ದಶಕದಲ್ಲಿ ವಿಶ್ವ ಕ್ರಿಕೆಟ್‍ನಲ್ಲಿ ಬೆಸ್ಟ್ ಆಲ್‍ರೌಂಡರ್ ಎಂದು ಖ್ಯಾತಿ ಪಡೆದಿದ್ದರು. 1992 ರಲ್ಲಿ ಪಾಕ್ ತಂಡವನ್ನು ಮುನ್ನಡೆಸಿದ್ದ ಇಮ್ರಾನ್ ಖಾನ್ ಪಾಕ್‍ಗೆ ವಿಶ್ವಕಪ್ ತಂದುಕೊಟ್ಟಿದ್ದರು. ಕ್ರಿಕೆಟ್‍ನಿಂದ ಇಮ್ರಾನ್ ಖಾನ್ ನಿವೃತ್ತಿ ಹೊಂದಿದ 28 ವರ್ಷಗಳ ಬಳಿಕ ಅವರ ವಿರುದ್ಧ ಸರ್ಫರಾಜ್ ನವಾಜ್ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ಪಾಕಿಸ್ತಾನದ ಪ್ರಧಾನಿ ವಿರುದ್ಧ ನವಾಜ್ ಮಾತ್ರವಲ್ಲದೇ, ಇಮ್ರಾನ್ ಖಾನ್ ಮಾಜಿ ಪತ್ನಿ ರೆಹಮ್ ಖಾನ್ ಕೂಡ ಇಂತಹದ್ದೇ ಆರೋಪಗಳನ್ನು ಮಾಡಿದ್ದರು. ಇಮ್ರಾನ್ ಖಾನ್ ಹಲವು ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದರು. ಅಲ್ಲದೇ ಮಾದಕ ದ್ರವ್ಯ ಸೇವಿಸುತ್ತಿದ್ದ ಎಂದು ಆರೋಪಿಸಿದ್ದರು. ವಿವಾಹಿತ ಸಂಬಂಧದಲ್ಲಿದ್ದ ವೇಳೆ ಆತ ನನ್ನ ಮೇಲೆ ದೈಹಿಕವಾಗಿ ಹಲ್ಲೆ ಕೂಡ ಮಾಡಿದ್ದ. ಮದುವೆಯಾದ ಪುರುಷನೊಬ್ಬನೊಂದಿಗೂ ಆತ ಸಂಬಂಧ ಹೊಂದಿದ್ದ ಎಂದು ತಮ್ಮ ಪುಸ್ತಕದಲ್ಲಿ ಆರೋಪಿಸಿದ್ದರು.