– ಬಡಿದಾಟಕ್ಕೆ ಮಹಿಳೆಯರೂ ಸಾಥ್
ರಾಯಚೂರು: ಇಬ್ಬರ ಜಮೀನು ವಿವಾದಕ್ಕೆ ಇಡೀ ಗ್ರಾಮವೇ ದೊಣ್ಣೆ, ಮಚ್ಚು ಮತ್ತು ಲಾಂಗು ಹಿಡಿದು ಹೊಡೆದಾಡಿಕೊಂಡಿರುವ ಘಟನೆ ರಾಯಚೂರು ಗಡಿಯ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೆದ್ದಕಡಬೂರು ಮಂಡಲದ ಹನುಮಾಪುರಂ ಗ್ರಾಮದಲ್ಲಿ ನಡೆದಿದೆ.
ಮುಖಕ್ಕೆ ಖಾರದಪುಡಿ ಎರಚಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಎರಡು ಗುಂಪುಗಳ ಹೊಡೆದಾಟದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಂಥವರನ್ನೂ ಬೆಚ್ಚಿ ಬೀಳಿಸುವಂತಿವೆ. ಜಮೀನಿನಲ್ಲಿ ಸಿಕ್ಕಸಿಕ್ಕವರನ್ನು ಹೊಡೆದು ಉರುಳಿಸುವ ಮಟ್ಟಿಗೆ ಜಗಳವಾಡಿದ್ದಾರೆ. ಈಗ ಇಡೀ ಗ್ರಾಮವೇ ಬೂದಿ ಮುಚ್ಚಿದ ಕೆಂಡದಂತಾಗಿದೆ.
ಗ್ರಾಮದ ಬೊಟ್ಟ ಪೆದ್ದಯ್ಯ ಹಾಗೂ ಬೋಯಿಸ ಯಲ್ಲಪ್ಪ ಎಂಬುವವರ ಜಮೀನು ವಿವಾದ ಹಿನ್ನೆಲೆ ಈಗಾಗಲೇ ಪ್ರಕರಣಗಳು ದಾಖಲಾಗಿದೆ. ಈಗ ಮತ್ತೆ ಜಮೀನು ಉಳುಮೆ ವಿಚಾರದಲ್ಲಿ ಜಗಳ ಶುರುವಾಗಿ ಇಡೀ ಗ್ರಾಮವೇ ಎರಡು ಗುಂಪಾಗಿ ಹೊಡೆದಾಡಿಕೊಂಡಿದೆ. ವಯಸ್ಸು, ಲಿಂಗ ಭೇದವಿಲ್ಲದೆ ಮಹಿಳೆಯರು ಸಹ ದೊಣ್ಣೆ ಮಾರಕಾಸ್ತ್ರಗಳನ್ನು ಹಿಡಿದು ಜಗಳ ಮಾಡಿದ್ದಾರೆ.
ಜಗಳಕ್ಕೆ ಸಿದ್ಧವಾಗಿಯೇ ಖಾರದಪುಡಿಯನ್ನು ಹಿಡಿದು ಕಣ್ಣಿಗೆ ಎರಚಿ ಹೊಡೆದಾಡುವ ದೃಶ್ಯಗಳನ್ನು ಗ್ರಾಮಸ್ಥರೇ ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಘಟನೆಯಲ್ಲಿ 15 ಜನರಿಗೆ ಗಂಭೀರ ಗಾಯಗಳಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 34 ಜನರ ವಿರುದ್ಧ ಪೆದ್ದಕಡಬೂರು ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.