– ಆಸ್ಟ್ರೇಲಿಯಾಗೆ 12 ರನ್‌ಗಳ ಜಯ
– 2-1 ಅಂತರದಿಂದ ಸರಣಿ ಗೆದ್ದ ಟೀಂ ಇಂಡಿಯಾ
ಸಿಡ್ನಿ: ನಾಯಕ ವಿರಾಟ್ ಕೊಹ್ಲಿ ಸಾಹಸದ ಹೊರತಾಗಿಯೂ ಕೊನೆಯ ಟಿ20 ಪಂದ್ಯವನ್ನು 12 ರನ್‌ಗಳಿಂದ ಆಸ್ಟ್ರೇಲಿಯಾ ಗೆಲ್ಲುವ ಮೂಲಕ ಭಾರತದ ಕ್ಲೀನ್ ಸ್ವೀಪ್ ಕನಸನ್ನು ಭಗ್ನಗೊಳಿಸಿದೆ.
ಗೆಲ್ಲಲು 187 ರನ್‌ಗಳ ಕಠಿಣ ಗುರಿಯನ್ನು ಪಡೆದ ಭಾರತ ಉತ್ತಮವಾಗಿಯೇ ಆಡುತ್ತಿತ್ತು. ಆದರೆ ಹಾರ್ದಿಕ್ ಪಾಂಡ್ಯ ಬೆನ್ನಲ್ಲೇ ವಿರಾಟ್ ಕೊಹ್ಲಿ ಔಟಾದ ಕಾರಣ ಅಂತಿಮವಾಗಿ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 174 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು.
ಇನ್ನಿಂಗ್ಸ್‌ನ 2ನೇ ಎಸೆತದಲ್ಲಿ ಕೆಎಲ್ ರಾಹುಲ್ ಶೂನ್ಯಕ್ಕೆ ಔಟಾದರು. ಎರಡನೇ ವಿಕೆಟ್‌ಗೆ ಶಿಖರ್ ಧವನ್ ಮತ್ತು ಕೊಹ್ಲಿ 8.5 ಓವರ್‌ಗಳಲ್ಲಿ 74 ರನ್ ಜೊತೆಯಾಟವಾಡಿದರು.
ಧವನ್ 28 ರನ್ ಗಳಿಸಿ ಔಟಾದರೆ ಸಂಜು ಸ್ಯಾಮ್ಸನ್ 10, ಶ್ರೇಯಸ್ ಅಯ್ಯರ್ 0 ಸುತ್ತಿದರು. ಹಾರ್ದಿಕ್ ಪಾಂಡ್ಯ 20 ರನ್(13 ಎಸೆತ, 1 ಬೌಂಡರಿ, 2 ಸಿಕ್ಸರ್) ಹೊಡೆದರೆ ವಿರಾಟ್ ಕೊಹ್ಲಿ 85 ರನ್(61 ಎಸೆತ, 4 ಬೌಂಡರಿ, 3 ಸಿಕ್ಸರ್) ಚಚ್ಚಿದರು. ಕೊನೆಯಲ್ಲಿ ಶಾರ್ದೂಲ್ ಠಾಕೂರ್ 17 ರನ್(7 ಎಸೆತ, 2 ಸಿಕ್ಸರ್) ಹೊಡೆದರು.
ಆಸ್ಟ್ರೇಲಿಯಾದ ಪರವಾಗಿ ಆರಂಭಿಕ ಆಟಗಾರ ಮಾಥ್ಯೂ ವೇಡ್ 80 ರನ್(53 ಎಸೆತ, 7 ಬೌಂಡರಿ, 2 ಸಿಕ್ಸರ್) ಗ್ಲೇನ್ ಮ್ಯಾಕ್ಸ್‌ವೆಲ್ 54 ರನ್(36 ಎಸೆತ, 3 ಬೌಂಡರಿ, 3 ಸಿಕ್ಸರ್) ಹೊಡೆದಿದ್ದರು.