– ಬಿಐಎಸ್ ಗುರುತು ಇಲ್ಲದೇ ಇದ್ದರೆ ದಂಡ
ನವದೆಹಲಿ: 2020ರ ಜೂನ್ 1 ರಿಂದ ಕಡ್ಡಾಯವಾಗಿ ಐಎಸ್‌ಐ ಗುರುತಿರುವ ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ (ಬಿಐಎಸ್) ಪ್ರಮಾಣಿತ ಹೆಲ್ಮೆಟ್‌ಗಳನ್ನು ಮಾತ್ರ ಉತ್ಪಾದನೆ ಮತ್ತು ಮಾರಾಟ ಮಾಡಬೇಕು.
ಈ ಸಂಬಂಧ ಕೇಂದ್ರ ರಸ್ತೆ ಸಾರಿಗೆ ಸಚಿವಾಲಯ ಅಧಿಸೂಚನೆ ಹೊರಡಿಸಿದ್ದು, ಒಂದು ವೇಳೆ ಹೆಲ್ಮೆಟ್‌ಗಳ ಮೇಲೆ ಐಎಸ್‌ಐ ಗುರುತು ಇಲ್ಲದೇ ಇದ್ದರೆ ದಂಡ ವಿಧಿಸಲಾಗುತ್ತದೆ.
ದ್ವಿಚಕ್ರ ವಾಹನ ಸವಾರರ ಸಾವಿಗೆ ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ಪ್ರಮುಖ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಸವಾರರ ರಕ್ಷಣೆ ಮಾಡಲು ಈ ಅಧಿಸೂಚನೆ ಹೊರಡಿಸಿದೆ.
ರಸ್ತೆ ಸುರಕ್ಷತೆಗೆ ಸಂಬಂಧಿಸಿದ ಸುಪ್ರೀಂ ಕೋರ್ಟ್ ಸಮಿತಿ 2018ರ ಮಾರ್ಚ್‌ನಲ್ಲಿ ಬಿಐಎಸ್ ಪ್ರಮಾಣಿತ ಹೆಲ್ಮೆಟ್‌ಗಳನ್ನು ಸವಾರರು ಕಡ್ಡಾಯವಾಗಿ ಧರಿಸಬೇಕೆಂದು ಶಿಫಾರಸು ಮಾಡಿತ್ತು. ಈ ಶಿಫಾರಸನ್ನು ಸರ್ಕಾರ ಈಗ ಜಾರಿಗೆ ತಂದಿದೆ.
ಕಳೆದ ವರ್ಷ ದ್ವಿಚಕ್ರ ವಾಹನ ಅಪಘಾತದಲ್ಲಿ ಬಲಿಯಾದ 56 ಸಾವಿರ ಜನರ ಪೈಕಿ 43,600 ಜನರ ಸಾವಿಗೆ ಅವರು ಹೆಲ್ಮೆಟ್ ಧರಿಸದೇ ಇರುವುದೇ ಕಾರಣವಾಗಿತ್ತು.
ದ್ವಿಚಕ್ರ ವಾಹನ ಹೆಲ್ಮೆಟ್ ತಯಾರಿಕಾ ಸಂಘಟನೆಯ ಅಧ್ಯಕ್ಷ ರಾಜೀವ್ ಕಪೂರ್ ಪ್ರತಿಕ್ರಿಯಿಸಿ, ಭಾರತದಲ್ಲಿ ದಿನನಿತ್ಯ ಮಾರಾಟವಾಗುತ್ತಿರುವ 2 ಲಕ್ಷ ಹೆಲ್ಮೆಟ್‌ಗಳ ಪೈಕಿ ಶೇ.40ರಷ್ಟು ಕಳಪೆ ಗುಣಮಟ್ಟದ ಹೆಲ್ಮೆಟ್‌ಗಳು ತಯಾರಾಗುತ್ತವೆ. ಹೆಚ್ಚಿನ ಸಂದರ್ಭಗಳಲ್ಲಿ ದ್ವಿಚಕ್ರವಾಹನ ಸವಾರರು ಪ್ಲಾಸ್ಟಿಕ್ ಕ್ಯಾಪ್‌ಗಳನ್ನು ಧರಿಸುತ್ತಿದ್ದಾರೆ. ಐಎಸ್‌ಐ ಪ್ರಮಾಣಿತ ಹೆಲ್ಮೆಟ್‌ಗಳ ಬಳಕೆಯಿಂದ ನೂರಾರು ಜನರು ಜನರ ಪ್ರಾಣ ಉಳಿಸಬಹುದು ಎಂದು ಹೇಳಿದ್ದಾರೆ.