ಲಂಡನ್: ಇನ್ನೆರಡು ವರ್ಷದಲ್ಲಿ ಕೊರೊನಾ ಕೊನೆಯಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ವಿಶ್ವಾಸ ವ್ಯಕ್ತಪಡಿಸಿದೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿರುವ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಡ್ರೋಸ್ ಅಧಾನೊಮ್, ಎರಡು ವರ್ಷದೊಳಗೆ ಕೊರೊನಾ ಮಾಯವಾಗುವ ಎಲ್ಲ ಲಕ್ಷಣಗಳು ಇದ್ದು, ಎಚ್1ಎನ್1 ಗಿಂದ ಕಡಿಮೆ ಅವಧಿಯಲ್ಲಿ ಕೊನೆಯಾಗಲಿದೆ. ಕೊರೊನಾ ವೈರಸ್ ಶತಮಾನಗಳ ನಂತರದ ಆರೋಗ್ಯ ಬಿಕ್ಕಟ್ಟಾಗಿದೆ. ಜಾಗತೀಕರಣದಿಂದಾಗಿ ಕೊರೊನಾ ಎಚ್1ಎನ್1 ಗಿಂತ ಅತೀ ವೇಗವಾಗಿ ಹೆಚ್ಚು ದೇಶಗಳಿಗೆ ಹರಡಿದೆ. ವೈರಸ್ ತಡೆಯಲು ಶತಮಾನಗಳ ಹಿಂದೆ ಇಷ್ಟು ತಂತ್ರಜ್ಞಾನ ಇರಲಿಲ್ಲ. ಆದರೆ ಈಗ ವಿವಿಧ ಬಗೆಯ ತಂತ್ರಜ್ಞಾನಗಳಿವೆ ಎಂದು ತಿಳಿಸಿದ್ದಾರೆ.
Advertisement
Advertisement
ನಮ್ಮ ಪ್ರಯತ್ನಗಳೆಲ್ಲ ಒಟ್ಟುಗೂಡಿದರೆ ಕೇವಲ ಇನ್ನು ಎರಡು ವರ್ಷಗಳಲ್ಲಿ ಕೊರೊನಾ ಇಲ್ಲದಂತಾಗುತ್ತದೆ ಎಂಬ ವಿಶ್ವಾಸವನ್ನು ಹೊಂದಿದ್ದೇವೆ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.
Advertisement
ಡಬ್ಲ್ಯುಎಚ್‍ಒ ನ ತುರ್ತು ವಿಭಾಗದ ಮುಖ್ಯಸ್ಥ ಡಾ.ಮೈಕಲ್ ರ್ಯಾನ್ ಈ ಕುರಿತು ವಿವರಿಸಿ, ಎಚ್1ಎನ್1 ಸಾಂಕ್ರಾಮಿಕ ರೋಗವು ಮೂರು ವಿಭಿನ್ನ ಹಂತಗಳಲ್ಲಿ ಭೂಗೋಳವನ್ನು ಅಪ್ಪಳಿಸಿತ್ತು. ಎರಡನೇ ಹಂತದಲ್ಲಿ ಎಚ್1ಎನ್1 ಭಾರೀ ವಿನಾಶಕಾರಿಯಾಗಿತ್ತು. ಆದರೆ ಕೊರೊನಾ ವೈರಸ್ ಸಹ ಅದೇ ರೀತಿ ಕಾಡುತ್ತದೆ ಎಂದು ತೋರುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
Advertisement
ಕೊರೊನಾ ವೈರಸ್ ಎಚ್1ಎನ್1 ರೀತಿಯಲ್ಲೇ ಅಲೆ ಎಬ್ಬಿಸಲಿದೆ ಎಂಬ ಕುರಿತು ಯಾವುದೇ ಸೂಚನೆ ಸಿಗುತ್ತಿಲ್ಲ. ವೈರಸ್ ನಿಯಂತ್ರಣದಲ್ಲಿಲ್ಲವಾದಾಗ ನೇರವಾಗಿ ಹಿಂದಕ್ಕೆ ಹೋಗುತ್ತದೆ. ಸಾಂಕ್ರಾಮಿಕ ವೈರಸ್‍ಗಳು ಕಾಲೋಚಿತ ಮಾದರಿಯಲ್ಲಿ ನೆಲೆಗೊಳ್ಳುತ್ತವೆ. ಆದರೆ ಆ ರೀತಿಯ ಯಾವುದೇ ಸೂಚನೆ ಕೊರೊನಾ ವೈರಸ್ ವಿಚಾರದಲ್ಲಿ ಕಂಡು ಬರುತ್ತಿಲ್ಲ ಎಂದು ರ್ಯಾನ್ ವಿವರಿಸಿದ್ದಾರೆ.
ದೇಶದಲ್ಲಿ ಸೋಂಕಿತರ ಸಂಖ್ಯೆ 29.76 ಲಕ್ಷಕ್ಕೆ ಏರಿಕೆ:
ಕೊರೊನಾ ತನ್ನ ರೌದ್ರನರ್ತನ ಮುಂದುವರಿಸಿದ್ದು ಕಳೆದ 24 ಗಂಟೆಯಲ್ಲಿ 69,878 ಹೊಸ ಪ್ರಕರಣಗಳು ವರದಿಯಾಗಿವೆ. ನಿನ್ನೆ ಒಂದೇ ದಿನ 945 ಜನರು ಕೊರೊನಾ ಬಲಿ ಪಡೆದುಕೊಂಡಿದ್ದು, ಸಾವನ್ನಪ್ಪಿದವರ ಸಂಖ್ಯೆ 55,794ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 29,75,702ಕ್ಕೆ ಏರಿಕೆ ಕಂಡಿದ್ದು, 6,97,330 ಸಕ್ರಿಯ ಪ್ರಕರಣಗಳಿವೆ. ಇನ್ನು ಗುಣಮುಖ ಪ್ರಮಾಣ ಶೇ.74.69ರಷ್ಟಿರೋದು ಸಮಾಧಾನಕರ ವಿಷಯ. ಶುಕ್ರವಾರ 10.23,836 ಜನರು ಕೊರೊನಾ ಪರೀಕ್ಷೆಗೆ ಒಳಪಟ್ಟಿದ್ದಾರೆ.
ಕೊರೊನಾ ಪೀಡಿತ ರಾಷ್ಟ್ರಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದೆ. ಅಮರಿಕ ಮತ್ತು ಬ್ರೆಜಿಲ್ ಮೊದಲು ಮತ್ತು ಎರಡನೇ ಸ್ಥಾನದಲ್ಲಿವೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರ ಪ್ರದೇಶ, ಕರ್ನಾಟಕ ಮತ್ತು ಉತ್ತರ ಪ್ರದೇಶ ರಾಜ್ಯಗಳು ದೇಶದಲ್ಲಿ ಕೊರೊನಾ ಸಂಖ್ಯೆಯಲ್ಲಿ ಮೊದಲ ಐದು ಸ್ಥಾನದಲ್ಲಿವೆ.