– ಕೀಟನಾಶಕ ಸೇವಿಸಿ ಆತ್ಮಹತ್ಯೆ
– ಸತ್ಯ ಬಚ್ಚಿಟ್ಟು ಯುವತಿ ಜೊತೆ ಲವ್
ಹೈದರಾಬಾದ್: ಇನಿಯ ಬಚ್ಚಿಟ್ಟ ಸತ್ಯ ತಿಳಿದ ಯುವತಿ ಮೋಸ ಹೋದೆ ಎಂದು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.
ರತ್ನಕುಮಾರಿ(24) ಮೃತ ಯುವತಿಯಾಗಿದ್ದಾಳೆ. ಈಕೆ ಮಲಬಂಜಾರಾ ಗ್ರಾಮದ ನಿವಾಸಿಯಾಗಿರುವ ಈಕೆ ಖಮ್ಮಮ್ನಲ್ಲಿ ದೋನಿಖಾನೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆಟೋ ಚಾಲಕ ಸಂಜಯ್‍ನನ್ನು ಪ್ರೀತಿಸುತ್ತಿದ್ದಳು. ಈತನ ಮದುವೆ ವಿಚಾರವನ್ನು ತಿಳಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಸಂಜಯ್ ಮತ್ತು ರತ್ನಕುಮಾರಿ ಇಬ್ಬರು ಪ್ರೀತಿಸುತ್ತಿದ್ದರು. ಆದರೆ ಸಂಜಯ್‍ಗೆ ಈ ಮೊದಲೇ ಮದುವೆಯಾಗಿತ್ತು. ಆದರೆ ಈ ವಿಚಾರವನ್ನು ರತ್ನಕುಮಾರಿಯಿಂದ ಮುಚ್ಚಿಟ್ಟಿದ್ದನು. ಈ ವಿಚಾರವನ್ನು ತಿಳಿದ ರತ್ನಕುಮಾರಿ ಬಾರೀ ಅಘಾತಕ್ಕೊಳಗಾಗಿದ್ದಳು. ಮಾರ್ಚ್ 9ರಂದು ತನ್ನ ಗ್ರಾಮಕ್ಕೆ ತೆರಳಿದ್ದ ಯುವತಿ ಮಾರ್ಚ್ 10 ರಂದು ಕೀಟನಾಶಕ ಸೇವಿಸಿದ್ದಾಳೆ.
ಕೀಟನಾಶಕ ಸೇವಿಸಿದ ಯುವತಿ ಹೊಟ್ಟೆ ನೋವಿನಿಂದ ಒದ್ದಾಡುತ್ತಿದ್ದಳು. ಗಮನಿಸಿದ ಪಾಲಕರು ಆಸ್ಪತ್ರೆಗೆ ದಾಖಲಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ. ಸಂಜಯ್ ವಿರುದ್ಧ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.