– ಕೋಟ್ಯಂತರ ರೂ. ಚಿನ್ನಾಭರಣ, ನಗದು ಕಳವು
– ಬೆಚ್ಚಿಬಿದ್ದ ಕರಾವಳಿ ಜಿಲ್ಲೆಯ ಮಂದಿ
ಮಂಗಳೂರು: ಒಂಟಿ ಮನೆಗೆ ನುಗ್ಗಿದ ಒಂಭತ್ತು ಮಂದಿ ಡಕಾಯಿತರು ಮನೆ ಯಜಮಾನಿಗೆ ಚೂರಿಯಿಂದ ಗಂಭೀರ ಹಲ್ಲೆ ನಡೆಸಿ, ಚಿನ್ನಾಭರಣ ಹಾಗೂ ನಗದು ದೋಚಿದ ಘಟನೆ ನಡೆದಿದೆ.
ದಕ್ಷಿಣಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕೌಕ್ರಾಡಿಯ ನೂಜಿಯಲ್ಲಿ ಘಟನೆ ನಡೆದಿದ್ದು, ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ ವಾಸವಾಗಿರುವ ತುಕ್ರಪ್ಪ ಶೆಟ್ಟಿಯವರು ಮನೆಯ ಮೊದಲನೇ ಮಹಡಿಯಲ್ಲಿ ರಾತ್ರಿ ಸುಖನಿದ್ರೆಗೆ ಜಾರಿದ್ದರು. ಆದರೆ ಮಧ್ಯರಾತ್ರಿ ಸುಮಾರು 2.15ಕ್ಕೆ ನಾಯಿ ಬೊಗಳುತ್ತಿರುವುದನ್ನು ಕಂಡು ಮನೆಯ ಮೇಲಂತಸ್ತಿನಿಂದ ಬಾಗಿಲು ತೆರೆದು ಹೊರ ಬಂದಿದ್ದರು. ಆದರೆ ಅಷ್ಟರಲ್ಲಾಗಲೇ ಮನೆಯ ಮೇಲಂತಸ್ತಿನ ಹೊರಭಾಗದಲ್ಲಿ ಹೊಂಚು ಹಾಕಿ ಕುಳಿತಿದ್ದ 9 ಜನ ಅಪರಿಚಿತ ಮುಸುಕುಧಾರಿಗಳು ಮನೆ ಒಳಗೆ ಪ್ರವೇಶ ಮಾಡಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಒಂಭತ್ತು ಮಂದಿ ಇದ್ದ ದರೋಡೆಕೋರರ ತಂಡ ತುಕ್ರಪ್ಪ ಶೆಟ್ಟಿಯವರನ್ನು ಕೂಡಿ ಹಾಕಿ ಹಲ್ಲೆ ನಡೆಸಿತ್ತು. ಈ ಸಂದರ್ಭ ತುಕ್ರಪ್ಪ ಶೆಟ್ಟಿಯವರ ಪತ್ನಿ ಪ್ರತಿರೋಧ ತೋರಿದ್ದರು. ಹೀಗಾಗಿ ದರೋಡೆಕೋರರು ಇವರ ಪತ್ನಿಗೆ ಚೂರಿಯಿಂದ ಹೊಟ್ಟೆಗೆ ಎರಡು ಬಾರಿ ಇರಿದು, ಮನೆ ಒಳಗಡೆ ಎಳೆದೊಯ್ದು ಕಪಾಟು, ಬೀರು ಒಪನ್ ಮಾಡಿಸಿ ಸಂಪತ್ತು ದೋಚಿದ್ದಾರೆ. ಸುಮಾರು ಒಂದು ಕೋಟಿ ಮೌಲ್ಯದ 30 ಪವನ್ ಚಿನ್ನ, ನಗದು ದೋಚಿ ಪರಾರಿಯಾಗಿದ್ದಾರೆ.
ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೆಟ್ಟಿಯವರ ಪತ್ನಿಯನ್ನು ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಮನೆಯಲ್ಲಿ ದಂಪತಿ ಸಹಿತ ಇಬ್ಬರು ಸಣ್ಣ ಮಕ್ಕಳು ಮಾತ್ರ ಇದ್ದು, ಇವರನ್ನೆಲ್ಲ ಮಾರಕಾಸ್ತ್ರ ತೋರಿಸಿ ಬೆದರಿಸಿ ಕೂಡಿ ಹಾಕಿ ಈ ದರೋಡೆ ನಡೆಸಲಾಗಿದೆ.
ಉಪ್ಪಿನಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಸ್ಥಳಕ್ಕೆ ದಕ್ಷಿಣ ಕನ್ನಡ ಎಸ್‍ಪಿ ಬಿ.ಎಂ.ಲಕ್ಷ್ಮೀಪ್ರಸಾದ್ ಸಹಿತ ಪೊಲೀಸರು ಭೇಟಿ ನೀಡಿ ಪರೀಶೀಲನೆ ನಡೆಸಿದ್ದಾರೆ. ಸ್ಥಳೀಯವಾಗಿ ಸಂಘಟನೆಯೊಂದರ ಅಧ್ಯಕ್ಷರಾಗಿದ್ದ ತುಕ್ರಪ್ಪ ಶೆಟ್ಟಿಯವರ ಮನೆಗೆ ಈ ದರೋಡೆಕೋರರು ನುಗ್ಗಿದ ವಿಷಯ ತಿಳಿಯುತ್ತಲೇ ನೂರಾರು ಮಂದಿ ಆಗಮಿಸಿದ್ದರು. ದರೋಡೆ ನಡೆಸಿ ಪರಾರಿಯಾಗಬಹುದಾದ ಎಲ್ಲ ರಸ್ತೆಗಳನ್ನು ನಾಕಾಬಂದಿ ಹಾಕಿ ಪೋಲೀಸರು ತನಿಖೆ ನಡೆಸುತ್ತಿದ್ದಾರೆ. ಒಟ್ಟಿನಲ್ಲಿ ಈ ದರೋಡೆ ಪ್ರಕರಣ ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ್ದು, ಪೊಲೀಸರು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.