ಕಾರವಾರ: ವೀಕೆಂಡ್ ಅಂದ್ರೆ ಉತ್ತರ ಕನ್ನಡ ಜಿಲ್ಲೆಗೆ ಪ್ರವಾಸಿಗರಿಗೇನೂ ಕೊರತೆ ಇಲ್ಲ. ಆದರೆ ಇಂದು ಒಂದೆಡೆ ಸಾರಿಗೆ ನೌಕರರ ಪ್ರತಿಭಟನೆ ಮತ್ತೊಂದೆಡೆ ಕೊರೊನಾ ಭೀತಿಯಿಂದ ಇದೇ ಮೊದಲ ಬಾರಿಗೆ ಜಿಲ್ಲೆಯ ಪ್ರಸಿದ್ಧ ಗೋಕರ್ಣದ ಮುಖ್ಯ ಕಡಲತೀರ, ಓಂ ಬೀಚ್, ಪ್ರವಾಸಿಗರಿಲ್ಲದೇ ಸಂಪೂರ್ಣ ಸ್ತಬ್ಧವಾಗಿದ್ದು,ಪ್ರವಾಸಿಗರಿಲ್ಲದೇ ಖಾಲಿ-ಖಾಲಿ ಹೊಡೆದಿದೆ.
ಶನಿವಾರ ಮತ್ತು ಭಾನುವಾರ ರಜಾ ದಿನದಲ್ಲಿ ಪ್ರವಾಸಿಗರು ಅತೀ ಹೆಚ್ಚು ಜನರು ಇಲ್ಲಿಗೆ ಭೇಟಿ ನೀಡುತ್ತಾರೆ. ಆದರೆ ಇಂದು ಸಂಪೂರ್ಣ ಸ್ತಬ್ಧವಾಗಿದ್ದು, ಜಿಲ್ಲೆಯ ಬಹುತೇಕ ಪ್ರವಾಸಿ ಸ್ಥಳಗಳು ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿವೆ.
Advertisement
Advertisement
ಪ್ರವಾಸಿಗರ ಕೊರತೆಗೆ ಕಾರಣವೇನು?: ಜಿಲ್ಲೆಯ ಗೋಕರ್ಣ ಭಾಗದಲ್ಲಿ ಬಹುತೇಕ ಮಹಾರಾಷ್ಟ್ರ, ಗೋವಾ ಭಾಗದಿಂದ ಪ್ರವಾಸಿಗರು ಬರುತ್ತಾರೆ. ಆದರೆ ಕೊರೊನಾ ಆರ್ಭಟದಿಂದಾಗಿ ಕಠಿಣ ಕ್ರಮವನ್ನು ಸರ್ಕಾರ ತೆಗೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ಈ ತಿಂಗಳಲ್ಲಿ ಪ್ರವಾಸಿಗರ ಸಂಖ್ಯೆ ಗಣನೀಯ ಇಳಿಕೆ ಕಂಡಿದೆ.
Advertisement
ಮುರುಡೇಶ್ವರಕ್ಕೆ ಹೊರರಾಜ್ಯದಿಂದಲ್ಲದೇ ಹೊರ ಜಿಲ್ಲೆಯಿಂದಲೂ ಸಹ ಸಾಕಷ್ಟು ಪ್ರವಾಸಿಗರು ಬರುತಿದ್ದರು. ಆದರೆ ಕೊರೊನಾ ಸಂಖ್ಯೆ ಹೆಚ್ಚಳ, ಸಾರಿಗೆ ನೌಕರರ ಮುಷ್ಕರದಿಂದಾಗಿ ಪ್ರವಾಸಿಗರು ಬೆರಳೆಣಿಕೆಯಷ್ಟು ಮಾತ್ರ ಈ ಭಾಗಕ್ಕೆ ಬಂದಿದ್ದಾರೆ. ವೀಕೆಂಡ್ ಆದ್ದರಿಂದ ಪ್ರವಾಸಿಗರ ನಿರೀಕ್ಷೆ ಮಾಡಲಾಗಿತ್ತು. ಆದರೆ ಲಾಕ್ ಡೌನ್ ನಂತರ ಇದೇ ಮೊದಲ ಬಾರಿಗೆ ಪ್ರವಾಸಿಗರ ಸಂಖ್ಯೆ ದೊಡ್ಡ ಮಟ್ಟದಲ್ಲಿ ಇಳಿಕೆ ಕಂಡಿದೆ.
Advertisement
ಅಡ್ವೆಂಚರ್ ಚಟುವಟಿಕೆ ಸ್ತಬ್ಧ!: ವೀಕೆಂಡ್ ಬಂದರೆ ಬಹುತೇಕ ಜಿಲ್ಲೆಯ ಕರಾವಳಿ ಭಾಗದಲ್ಲಿ ಜಲಸಾಹಸ ಕ್ರೀಡೆಗಳು ಗರಿಗೆದರುತ್ತದೆ. ಆದರೇ ಇಂದು ಮುರುಡೇಶ್ವರದಲ್ಲಿ ನೆಡೆಯುವ ಸ್ಕೂಬಾ ಡೈ, ಜಲಾಸಹಾಸ ಕ್ರೀಡೆ,ಬೋಟಿಂಗ್ ಎಲ್ಲವೂ ಗ್ರಾಹಕರಿಲ್ಲದೇ ನಷ್ಟ ಅನುಭವಿಸಿದೆ.
ಮುರುಡೇಶ್ವರದ ನೇತ್ರಾಣಿ ಅಡ್ವೇಂಚರ್ ಸಂಸ್ಥೆಯ ಮಾಲೀಕ ಗಣೇಶ್ ಅವರು ಹೇಳುವಂತೆ ವೀಕೆಂಡ್ ನಲ್ಲಿ ಮುರುಡೇಶ್ವರ ಭಾಗದಲ್ಲಿ ಒಂದು ದಿನಕ್ಕೆ ಪ್ರವಾಸಿಗರಿಂದ 50 ಲಕ್ಷದಿಂದ ಒಂದು ಕೋಟಿಯಷ್ಟು ಆರ್ಥಿಕ ಚಟುವಟಿಕೆ ನೆಡೆಯುತ್ತದೆ. ಆದರೆ ಇಂದು ಲಾಡ್ಜ್ ಗಳು, ಹೋಂ ಸ್ಟೇ, ರೆಸಾರ್ಟ್ ಗಳು ಕಾಲಿ ಹೊಡೆಯುತ್ತಿದೆ. ಸ್ಕೂಬಾ ಡೈ ಮಾಡಲು ಒಂದು ದಿನಕ್ಕೆ 25 ಜನರು ಬರುತಿದ್ದರು. ಆದರೆ ಇಂದು ಕೇವಲ 15 ಜನ ಮಾತ್ರ ಸಮುದ್ರದಾಳದಲ್ಲಿ ಡೈ ಮಾಡಿದ್ದಾರೆ. ಕೊರೊನಾ ಹೆಚ್ಚಾದ್ದರಿಂದ ನೈಟ್ ಕಫ್ರ್ಯೂ ಜಾರಿ ಮಾಡಿದ್ದರಿಂದ ಉತ್ತರ ಕನ್ನಡ ಜಿಲ್ಲೆಯ ಪ್ರವಾಸೋದ್ಯಮಕ್ಕೆ ದೊಡ್ಡ ಹೊಡೆತ ಬಿದ್ದಿದೆ ಎಂದು ವಿವರಿಸಿದ್ದಾರೆ.
ಒಟ್ಟಿನಲ್ಲಿ ಇದೇ ಮೊದಲಬಾರಿಗೆ ಕರಾವಳಿಯ ಸಮುದ್ರ ತೀರಗಳು ಜನರ ಗಿಜಿಗುಡುವ ಸದ್ದಿನಿಂದ ಸ್ತಬ್ಧವಾಗಿತ್ತು.