ಹಾಸನ: ಬೇಲೂರು ಪುರಸಭೆಗೆ ನಡೆದ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು ಜೆಡಿಎಸ್ ಭದ್ರಕೋಟೆಯಲ್ಲಿ ಕಾಂಗ್ರೆಸ್ ಈ ಬಾರಿ ತನ್ನ ಬಾವುಟವನ್ನು ಹಾರಿಸಿದೆ.
ಕಳೆದ ಬಾರಿ 13 ಸ್ಥಾನಗಳನ್ನು ಗೆದ್ದಿದ್ದ ಜೆಡಿಎಸ್ ಅಧಿಕಾರದ ಚುಕ್ಕಾಣಿಯನ್ನು ಹಿಡಿದಿತ್ತು. ಆದರೆ ಈ ಬಾರಿ ಕೇವಲ ಐದು ಸ್ಥಾನಗಳಿಗೆ ಸೀಮಿತವಾಗಿ ತೀವ್ರ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ 17 ಸ್ಥಾನ ಪಡೆದು ಭರ್ಜರಿ ಗೆಲುವು ಸಾಧಿಸಿದೆ.
ಹಾಸನ ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಇಂದು ಹೊರಬಿದ್ದ ಫಲಿತಾಂಶದಲ್ಲಿ ಕಾಂಗ್ರೆಸ್ 17 ಸ್ಥಾನವನ್ನು ಪಡೆದರೆ ಜೆಡಿಎಸ್ 5 ಸ್ಥಾನಗಳನ್ನು ಪಡೆದಿದ್ದು ಇನ್ನು ಬಿಜೆಪಿ ಪಕ್ಷ ಕೇವಲ 1 ಸ್ಥಾನ ಪಡೆಯುವ ಮೂಲಕ ತನ್ನ ಖಾತೆಯನ್ನು ತೆರೆದಿದೆ.
ರಾಜ್ಯದಲ್ಲಿ ಬಿಜೆಪಿ ಸರಕಾರವಿದ್ದು, ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಮ್ ಗೌಡ ತನ್ನದೇ ವರ್ಚಸ್ಸನ್ನು ಉಳಿಸಿಕೊಂಡಿದ್ದಾರೆ. ಇದರ ನಡುವೆ ಬಿಜೆಪಿಯ ಜಿಲ್ಲಾಧ್ಯಕ್ಷರಾಗಿರುವ ಹುಲ್ಲಹಳ್ಳಿ ಸುರೇಶ್ ಗೌಡ ಕೂಡ ಬೇಲೂರು ತಾಲ್ಲೂಕಿನವರು. ಆದರೂ ಇಲ್ಲಿ ಬಿಜೆಪಿ ನೆಲಕಚ್ಚಿದ್ದು ಕೇವಲ ಒಂದು ಸ್ಥಾನಕ್ಕೆ ತೃಪ್ತಿ ಪಟ್ಟಿದೆ.