ಬೆಂಗಳೂರು: ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್ ಖಾನ್ ಅವರ ಮನೆ ಮೇಲೆ ನಡೆದ ಇಡಿ ಅಧಿಕಾರಿಗಳ ಮ್ಯಾರಥಾನ್ ದಾಳಿ ಸತತ 23 ಗಂಟೆ ಗಳ ಬಳಿ ಅಂತ್ಯವಾಗಿದೆ. ಇಡಿ ದಾಳಿಗೆ ಪ್ರಮುಖ ಕಾರಣಗಳನ್ನು ನೋಡುತ್ತಾ ಹೋದರೆ ಮೊದಲಿಗೆ ಸಿಗೋದೆ ಜಮೀರ್ ಅಹ್ಮದ್ ಅವರ ಮಗಳ ಮದುವೆ ಎಂಬ ವದಂತಿ ಹರಿದಾಡುತ್ತಿದೆ.
ಜಮೀರ್ ಅಹ್ಮದ್ ಮನೆ ಮೇಲಿನ ದಾಳಿ ಎಲ್ಲರ ಕುತೂಹಲಕ್ಕೆ ಕಾರಣವಾಗಿತ್ತು. ಈ ದಾಳಿಗೆ ಮೊದಲ ಕಾರಣ ಜಮೀರ್ ಅವರ ಮಗಳ ಅದ್ದೂರಿ ಮದುವೆ ಎಂಬ ಮಾತು ಕೇಳಿಬರುತ್ತಿದೆ. ಕಳೆದ ಜುಲೈ 22 ರಂದು ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆದ ಆ ಅದ್ದೂರಿ ಮದುವೆ ಯಾವ ಮಹಾರಾಜರ ಮದುವೆ ಗೂ ಕಡಿಮೆ ಇರಲಿಲ್ಲ. ಬಾಲಿವುಡ್ ನಟ -ನಟಿಯರು, ರಾಜಕೀಯ ಮುಖಂಡರು, ಸೇರಿದಂತೆ ಉದ್ಯಮಿ ಗಳು ಆ ಮದುವೆ ಗೆ ಆಗಮಿಸಿದ್ದರು. ಮಗಳ ಮೈಮೇಲೆ ಕೆಜಿ, ಕೆಜಿ ಮೌಲ್ಯದ ಚಿನ್ನಾಭರಣ, ಲಕ್ಷಾಂತರ ರೂಪಾಯಿ ಬೆಲೆಯ ಬಟ್ಟೆಗಳು. ಅಣ್ಣ ಅಂದವರಿಗೆ ಕೈತುಂಬಾ ಕಾಸು, ಮದುವೆಗೆ ಬಂದವರಿಗೆ ಬೆಲೆಬಾಳುವ ವಸ್ತ್ರಗಳನ್ನು ಉಡುಗೊರೆಯಾಗಿ ನೀಡಿದ್ದರು. ಇದನ್ನೂ ಓದಿ: ಶಾಸಕ ಜಮೀರ್‌ಗೆ ಇಡಿ ಶಾಕ್ – ಸತತ 23 ಗಂಟೆಗಳ ಕಾಲ ನಡೆದ ದಾಳಿ ಅಂತ್ಯ
ಮದುವೆಯ ಅಲಂಕಾರಕ್ಕೆ ವಿದೇಶದಿಂದ ಬಂದಿದ್ದ ವಸ್ತ್ರಗಳ ಅಲಂಕಾರಿಗರು, ಹೀಗೆ ಹಲವು ವಿಶೇಷತೆಯಿಂದ ಅದ್ದೂರಿಯಾಗಿ ಮದುವೆ ನಡೆದಿತ್ತು. ಐಎಂಎ ಸಂಸ್ಥಾಪಕ ಮಾನ್ಸೂರ್ ಖಾನ್ ಕೊಟ್ಟ ಕೋಟ್ಯಾಂತರ ಹಣ, ಕೆಜಿಗಟ್ಟಲೇ ಚಿನ್ನಾಭರಣವನ್ನು ಜಮೀರ್ ಗೆ ನೀಡಿರುವ ಬಗ್ಗೆ ಆರೋಪ ಕೂಡ ಕೇಳಿಬಂದಿತ್ತು. ಹಾಗಾಗಿ ಇಡಿ ದಾಳಿಗೆ ಇದು ಕೂಡ ಒಂದು ಕಾರಣವಾಗಿದೆ. ಇದರೊಂದಿಗೆ ಮಗಳ ಅದ್ದೂರಿ ಮದುವೆ ನಂತರ ಐಟಿ ಮತ್ತು ಇಡಿಗೆ ಸುಳ್ಳು ಲೆಕ್ಕ ತೋರಿಸಿರುವ ಬಗ್ಗೆ ಮಾಹಿತಿ ಬಂದಿದ್ದು, ಈ ಹಿನ್ನೆಲೆಯಲ್ಲಿ ಇಡಿ ದಾಳಿ ನಡೆದಿರಬಹುದು ಎಂದು ಶಂಕಿಸಲಾಗಿದೆ.