ಚಿಕ್ಕಮಗಳೂರು: ಇಂದು ಕನ್ನಡ ರಾಜ್ಸೋತ್ಸವ. 1947ರಲ್ಲಿ ಭಾರತ ಗಣರಾಜ್ಯ ಸ್ವತಂತ್ರಗೊಂಡು 1950ರಲ್ಲಿ ಸಂವಿಧಾನ ಜಾರಿ ಆದ ಬಳಿಕ ರಾಜ್ಯ ಮರು ವಿಂಗಡಣೆ ಕಾಯ್ದೆಯಂತೆ 1956ರಲ್ಲಿ ಕರ್ನಾಟಕ ರಾಜ್ಯದ ರಚನೆ ಆಯಿತು. ಈ ಹಿನ್ನೆಲೆಯಲ್ಲಿ ಇಂದು ಕನ್ನಡ ರಾಜ್ಯೋತ್ಸವ ಆಚರಿಸಲಾಗ್ತಿದೆ. ಕೋವಿಡ್ ಕಾರಣದಿಂದ ಸರಳವಾಗಿ ರಾಜೋತ್ಸವ ಆಚರಿಸಲಾಗ್ತಿದೆ.
ಕರ್ನಾಟಕದಲ್ಲೇ ಕನ್ನಡದ ಉಳಿವಿಗಾಗಿ ಹೋರಾಡಬೇಕಾದ ಸ್ಥಿತಿ ಬಂದೊಂದಗಿದೆ. ಕನ್ನಡದ ಅಸ್ತಿತ್ವಕ್ಕಾಗಿ ಕನ್ನಡಿಗರೇ ಹೋರಾಟ, ಚಳುವಳಿಗಿಳಿದಿರೋದು ನಿಜಕ್ಕೂ ದುರಾದೃಷ್ಟ. ಇಂತಹ ಕಾಲಘಟ್ಟದಲ್ಲಿ ಇಲ್ಲೊಂದು ದೇವಾಲಯದ ಮಾತ್ರ ಕನ್ನಡವನ್ನ ಉಳಿಸಿ, ಬೆಳೆಸೋದ್ರ ಜೊತೆ ಕನ್ನಡದ ಮಹತ್ವವನ್ನ ವಿಶ್ವವ್ಯಾಪ್ತಿ ಸಾರುವ ಕೆಲಸದಲ್ಲಿ ನಿರತವಾಗಿದೆ. ಇಲ್ಲಿ ಸಂಸ್ಕೃತಕ್ಕೆ ನೋ ಎಂಟ್ರಿ. ಮದುವೆ, ಉಪನಯನ ಸೇರಿದಂತೆ ಎಲ್ಲಾ ಧಾರ್ಮಿಕ ಪೂಜೆಯೂ ಕನ್ನಡದಲ್ಲೇ. ಇದು ನಿಜಕ್ಕೂ ಕನ್ನಡಿಗನ ಹೆಮ್ಮೆ.
ಕಲೆ, ಸಾಹಿತ್ಯ, ಸಾಂಸ್ಕøತಿಕ ಕ್ಷೇತ್ರದಲ್ಲಿ ಕಾಫಿನಾಡು ಚಿಕ್ಕಮಗಳೂರು ತನ್ನದೇ ಆದ ಚಾಪು ಮೂಡಿಸಿದೆ. ಇಲ್ಲಿಂದ ಐದಾರು ಕಿ.ಮೀ. ದೂರದ ಶ್ರೀ ಕೋದಂಡರಾಮ ಸ್ವಾಮಿ ದೇವಾಲಯದಲ್ಲಿ ಕೋದಂಡರಾಮನಿಗೆ ಕನ್ನಡದಲ್ಲೇ ಪೂಜೆ-ಕೈಂಕರ್ಯಗಳನ್ನ ನೆರವೇರಿಸೋ ಮೂಲಕ ಕಾಫಿನಾಡು ತನ್ನದೇ ಆದ ಖ್ಯಾತಿ ಗಳಿಸಿದೆ. ದೇವಾಲಯಗಳಲ್ಲಿ ಸಂಸ್ಕೃತದಲ್ಲಿ ಮಂತ್ರ ಪಠಣ ಮಾಡೋದು ಸಾಮಾನ್ಯ. ಆದರೆ ಈ ದೇವಾಲಯದ ಅರ್ಚಕರಾಗಿರೋ ಹಿರೇಮಗಳೂರು ಕಣ್ಣನ್, ಕನ್ನಡದಲ್ಲೇ ಪೂಜೆ ಮಾಡೋದನ್ನ ರೂಢಿಸಿಕೊಂಡಿದ್ದಾರೆ. ಹಿರೇಮಗಳೂರಿನ ಈ ದೇವಾಲಯದಲ್ಲಿ ನಿತ್ಯವೂ ಮಂತ್ರ ಪಠಣ, ಹೋಮ, ಹವನ ಎಲ್ಲವೂ ಕನ್ನಡದಲ್ಲೇ. ಮದುವೆಯನ್ನು ಕನ್ನಡದಲ್ಲೇ ಮಾಡೋದು ಇಲ್ಲಿನ ವಿಶೇಷ. ದೇವಾಲಯದೊಳಗಿನ ಗೋಡೆಗಳ ಮೇಲೆಲ್ಲವೂ ಕನ್ನಡಮಯ. ದೇವಾಲಯದ ವಠಾರವೆಲ್ಲವೂ ಸಂಪೂರ್ಣ ಕನ್ನಡಾಂಭೆಯ ಮಡಿಲು. ದೇವಾಲಯಕ್ಕೆ ಬರುವ ಭಕ್ತರಿಗೆ ಭಕ್ತಿಯ ಜೊತೆ ಕನ್ನಡ ಹಾಗೂ ಜೀವನದ ಪಾಠಗಳ ಸಂದೇಶವುಳ್ಳ ಬರಹಗಳು ದೇವಾಲಯದ ಗೋಡೆಗಳ ಮೇಲೆಲ್ಲಾ ರಾರಾಜಿಸ್ತಿವೆ.
ನಾಲ್ಕು ದಶಕಗಳ ಹಿಂದೆ ಚಿಕ್ಕಮಗಳೂರಿನ ಹಿರೇಮಗಳೂರಿಗೆ ಆಗಮಿಸಿದ ಕಣ್ಣನ್ ತಂದೆ ಸಚ್ಚಿದಾನಂದರವರು ಕನ್ನಡ ನೆಲದಲ್ಲಿ ಕನ್ನಡವೇ ಕಣ್ಮರೆಯಾಗ್ತಿರೋ ಕಾಲದಲ್ಲಿ ಏಕೆ ಕನ್ನಡವನ್ನು ಉಳಿಸಬಾರದೆಂದು ನಿತ್ಯವೂ ಕೋದಂಡರಾಮನಿಗೆ ಕನ್ನಡದಲ್ಲಿ ಪೂಜೆ ಸಲ್ಲಿಸಲು ಪ್ರಾರಂಭಿಸಿದ್ದರು. ಅಪ್ಪನ ಹಾದಿಯನ್ನೇ ಮೈಗೂಡಿಸಿಕೊಂಡ ಕಣ್ಣನ್ ಕೂಡ ಅಂದಿನಿಂದಲೂ ಕನ್ನಡದಲ್ಲಿ ಪೂಜೆ ಮಾಡುವುದನ್ನು ಅಭ್ಯಾಸ ಮಾಡಿಕೊಂಡು, ಕನ್ನಡದ ನೆಲದಲ್ಲೇ ಕನ್ನಡದ ಉಳಿವಿಗೆ ಶ್ರಮಿಸುತ್ತಿದ್ದಾರೆ. ದೇಶ ವಿದೇಶಗಳಿಂದ್ಲೂ ಇಲ್ಲಿಗೆ ನೂರಾರು ಭಕ್ತರು ಆಗಮಿಸ್ತಾರೆ. ವಿಶ್ವದ ನಾನಾ ಭಾಗಗಳಿಂದ ಬರೋ ವಿದೇಶಿಗರಿಗೆ ಸಂಸ್ಕೃತ ಹೇಳಿಕೊಡೋ ಕಣ್ಣನ್, ಕೋದಂಡರಾಮನಿಗೆ ಕನ್ನಡದಲ್ಲೇ ಪೂಜಾ ಕೈಂಕರ್ಯ ನೆರವೇರಿಸುತ್ತಿದ್ದಾರೆ. ದೇವರಿಗೆ ಕನ್ನಡದಲ್ಲೇ ಮಂತ್ರ ಪಠಣ ಕೇಳಿದ ಭಕ್ತರಿಗೆ ಅಚ್ಚರಿಯಾಗೋದ್ರ ಜೊತೆ ಕಣ್ಣನ್ ಮಾಮನ ಬಗ್ಗೆಯೂ ಅಪಾರ ಗೌರವ ವ್ಯಕ್ತಪಡಿಸ್ತಾರೆ.
ಒಟ್ಟಾರೆ ಇಲ್ಲಿಗೆ ಬರುವ ಭಕ್ತರಿಗೆ ಕನ್ನಡ ನಾಡು ನುಡಿಯ ಬಗ್ಗೆ ಅರಿವೂ ಮೂಡಿಸುವ ಕಾರ್ಯವನ್ನು ಈ ದೇವಾಲಯ ಮಾಡ್ತಿದೆ. ಆಂಗ್ಲ ಭಾಷೆಯ ವ್ಯಾಮೋಹದ ನಡುವೆ ಮರೆಯಾಗ್ತಿರೋ ಕನ್ನಡವನ್ನು ಉಳಿಸಿ ಬೆಳೆಸುವ ಕಾರ್ಯವನ್ನು ಮಾಡುತ್ತಿರುವ ಕಣ್ಣನ್‍ರವರ ಸಾಧನೆ ನಿಜಕ್ಕೂ ಶ್ಲಾಘನೀಯ. ಆದರೆ ಸರ್ಕಾರವೂ ಕಣ್ಣನ್‍ಗೆ ಸೂಕ್ತ ರೀತಿಯಲ್ಲಿ ಸಹಕಾರ ನೀಡಿದ್ದೇ ಆದ್ರೆ, ಮುಂದಿನ ದಿನಗಳಲ್ಲಿ ಕಣ್ಣನ್ ಇಡೀ ಕರ್ನಾಟಕವೇ ಕನ್ನಡಮಯವಾಗಿಸೋದ್ರಲ್ಲಿ ಎರಡು ಮಾತಿಲ್ಲ.